ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಗೆ ಇಬ್ಬರು ಬಲಿ, 84 ಮಂದಿಗೆ ಕೊರೋನ ಪಾಸಿಟಿವ್

Update: 2021-09-19 14:31 GMT

ಉಡುಪಿ, ಸೆ.19: ರವಿವಾರ ಜಿಲ್ಲೆಯಲ್ಲಿ ಇಬ್ಬರು ಪುರುಷರು ಕೊರೋನಕ್ಕೆ ಬಲಿಯಾಗಿದ್ದು, 84 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 232 ಮಂದಿ ಸೋಂಕಿನಿಂದ ಮುಕ್ತರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1249ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಕಾರ್ಕಳ ತಾಲೂಕಿನ 54 ಮತ್ತು 80 ವರ್ಷ ಪ್ರಾಯದ ಇಬ್ಬರು ಪುರುಷರು ಸೋಂಕಿನಿಂದ ಚೇತರಿಸಿಕೊಳ್ಳದೇ ಮೃತಪಟ್ಟಿದ್ದಾರೆ. 54 ವರ್ಷ ಪ್ರಾಯದವರು ಕೋವಿಡ್ ಲಕ್ಷಣದೊಂದಿಗೆ ಉಸಿರಾಟ ತೊಂದರೆಯಿಂದ ಸೆ.6ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಿನ್ನೆ ಮೃತಪಟ್ಟರೆ, 80ರ ವೃದ್ಧರು ಜ್ವರ ಹಾಗೂ ಕೆಮ್ಮುವಿನೊಂದಿಗೆ ತೀವ್ರ ಉಸಿರಾಟ ತೊಂದರೆಗೆ ಶುಕ್ರವಾರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಶನಿವಾರ ಮೃತಪಟ್ಟರು. ಇವರಿಬ್ಬರ ಸಾವಿನೊಂದಿಗೆ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ 464ಕ್ಕೇರಿದೆ.

ದಿನದಲ್ಲಿ ಸೋಂಕು ದೃಢಪಟ್ಟ 84 ಮಂದಿಯಲ್ಲಿ 48 ಮಂದಿ ಪುರುಷರು ಹಾಗೂ 36 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 47 ಮಂದಿ ಉಡುಪಿ ತಾಲೂಕು, 18 ಮಂದಿ ಕುಂದಾಪುರ ಹಾಗೂ 19 ಮಂದಿ ಕಾರ್ಕಳ ತಾಲೂಕಿನವರು. ಇವರಲ್ಲಿ 12 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 72 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ 232 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 74,011ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 8007 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 75,724ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,91,112 ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

210 ಮಂದಿಗೆ ಲಸಿಕೆ:  ಜಿಲ್ಲೆಯಲ್ಲಿ ರವಿವಾರ 210 ಮಂದಿ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 105 ಮಂದಿ ಮೊದಲ ಡೋಸ್ ಹಾಗೂ 105 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ. ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷ ದೊಳಗಿನ 137 ಮಂದಿ ಹಾಗೂ 45 ವರ್ಷ ಮೇಲಿನ 73 ಮಂದಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News