ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಮಹೋತ್ಸವ ಆಚರಣೆ: ಕೃಷ್ಣಾಪುರ ಶ್ರೀ

Update: 2021-09-19 14:42 GMT

ಉಡುಪಿ, ಸೆ.19: ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿ ಸಭೆ ಹಾಗೂ ಪರ್ಯಾಯ ಕಚೇರಿಯ ಉದ್ಘಾಟನಾ ಸಮಾರಂಭವು ರವಿವಾರ ಕೃಷ್ಣಾಪುರ ಮಠದ ಶ್ರೀಕೃಷ್ಣಸಭಾ ಮಂದಿರದಲ್ಲಿ ನಡೆಯಿತು.

ಕಚೇರಿಯನ್ನು ಉದ್ಘಾಟಿಸಿದ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪರ್ಯಾಯೋತ್ಸವವನ್ನು ಪ್ರತೀ ಬಾರಿಯಂತೆ ನಡೆಸಲು ಸಿದ್ಧತೆ ನಡೆಸಲಾಗುವುದು. ಆದರೆ ಆ ಅವಧಿಯ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಮಹೋತ್ಸವವನ್ನು ಆಚರಿಸಲಾಗುವುದು. ಮಹೋತ್ಸವವನ್ನು ವಿಜೃಂಭಣೆಯಿಂದ ಮಾಡಲು ಅವಕಾಶ ಇದ್ದರೆ ಮಾತ್ರ ಮಾಡಲಾಗುವುದು. ಇಲ್ಲದಿದ್ದರೆ ಪರಂಪರೆಯಾಗಿ ಮಾಡಿಕೊಂಡ ಕ್ರಮಗಳನ್ನು ಮಾತ್ರ ನೆರವೇರಿಸಲಾಗುವುದು ಎಂದರು.

ಸಮಿತಿಯ ಕಾರ್ಯಾಧ್ಯಕ್ಷ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಕೋವಿಡ್ ನಿಯಮಾನುಸಾರ ಪರ್ಯಾಯೋತ್ಸವದ ರೂಪು ರೇಷೆಯನ್ನು ತಯಾರಿಸಲಾಗುವುದು. ನಾಳೆ ಅಧಿವೇಶನದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರ್ಯಾಯ ಮಹೋತ್ಸವ ಹಾಗೂ ಉಡುಪಿ ನಗರದ ಅಭಿವೃದ್ಧಿಗೆ ಸರಕಾರದಿಂದ ಗರಿಷ್ಠ ಅನುದಾನವನ್ನು ಬಿಡುಗಡೆ ಮಾಡಲು ವಿನಂತಿಸಲಾಗು ವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮೆರವಣಿಗೆಗೆ ಬೇಕಾದ ರಾಜ್ಯ ಮಟ್ಟದ ವಿಶೇಷ ಜಾನಪದ ತಂಡಗಳು ಭಾಗವಹಿುವಂತೆ ಮಾಡ ಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಟೀಲು ಅರ್ಚಕರಾದ ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾ ಯಣ ಅಸ್ರಣ್ಣ, ಅನಂತ ಅಸ್ರಣ್ಣ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರ್, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

ಪರ್ಯಾಯ ಸಮಿತಿಯ ಅಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ ಸ್ವಾಗತಿಸಿದರು. ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಕಾರ್ಯಕಾರಿ ಸದಸ್ಯರ ವಿವರವನ್ನು ನೀಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿ. ಲಕ್ಷ್ಮೀನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸಂಯೋಜಕ ಯು.ಕೆ.ರಾಘವೇಂದ್ರ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News