ಪೂನಾ ಒಪ್ಪಂದಕ್ಕಾಗಿ ದಲಿತರಿಂದ ಹೋರಾಟ ಅಗತ್ಯ: ಜಯನ್ ಮಲ್ಪೆ
ಕುಂದಾಪುರ, ಸೆ.19: ಎರಡನೆಯ ದುಂಡುಮೇಜಿನ ಸಭೆಯಲ್ಲಿ ಅಂಬೇಡ್ಕರ್ ಮಂಡಿಸಿದ್ದ ದಲಿತರಿಗೆ ಪ್ರತ್ಯೇಕ ಚುನಾವಣಾ ಪ್ರಾತಿನಿಧ್ಯತೆ ನೀಡಬೇಕೆಂಬ ಬೇಡಿಕೆಗಾಗಿ ದಲಿತರು ಮತ್ತೊಮ್ಮೆ ದೇಶಾದ್ಯಾಂತ ಹೋರಾಟ ಮಾಡಬೇಕೆಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.
ಕುಂದಾಪುರದ ದಲಿತ ಸಂಘರ್ಷ ಸಮಿತಿ ವತಿಯಿಂದ ರವಿವಾರ ಕಂದಾವರದಲ್ಲಿ ನಡೆದ ಸ್ವಾಭಿಮಾನ ಸಮಾವೇಶ ಮತ್ತು ನೂತನ ಕಂದಾವರ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ದಲಿತರ ಮೇಲೆ ದೌರ್ಜನ್ಯ ನಡೆಸುವವರ ಕೈಯಲ್ಲಿ ರಾಜಕೀಯ ಅಧಿಕಾರ ಇರುವುದರಿಂದ ಇದನ್ನು ಕೊನೆಗಾನಿಸಲು ಅವರ ಕೈಯಲ್ಲಿರುವ ರಾಜಕೀಯ ಅಧಿಕಾರವನ್ನು ದಲಿತರು ಪಡೆಯಬೇಕಾಗಿದೆ. ಇದಕ್ಕಾಗಿ ದಲಿತರು ಅಂಬೇಡ್ಕರರ ಪೂನಾ ಒಪ್ಪಂದವನ್ನು ಮರು ಜಾರಿಗೆ ಆಗ್ರಹಿಸಿ ದೇಶವ್ಯಾಪಿ ಆಂದೋಲನ ನಡೆಸಬೇಕು ಎಂದು ಅವರು ತಿಳಿಸಿದರು.
ದಸಂಸ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ನಮ್ಮ ದೇಶದ ಅಧೋಗತಿಗೆ ಪುರೋಹಿತಶಾಹಿ ಬ್ರಾಹ್ಮಣರೇ ಕಾರಣ. ವಿದ್ಯೆಯನ್ನು ಪಡೆಯಲು ಹೋಗಿ ಬ್ರಾಹ್ಮಣ್ಯದ ವಿರುದ್ಧ ಹೋರಾಟ ಮಾಡಿದ ರಾಮಾಯಣದ ಶಂಭೂಕ, ಇಡೀ ಶೂದ್ರ ಜನಾಂಗಕ್ಕೆ ಸ್ವಾಭಿಮಾನದ ಅಭಿವ್ಯಕಿಯಾಗಿದ್ದಾರೆ ಎಂದು ಹೇಳಿದರು.
ಸಮಾವೇಶವನ್ನು ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಾಬಿ ಉದ್ಘಾಟಿಸಿದರು. ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಹಿರಿಯ ಹೋರಾಟಗಾರ ಸುರೇಶ್ ಬಾರ್ಕೂರು, ಪ್ರಭಾಕರ್ ವಿ., ಸಂಜೀವ ತೆಕ್ಕಟ್ಟೆ, ಮಹಿಳಾ ಸಂಚಾಲಕಿ ಗೀತಾ ಸುರೇಶ್, ನಯನ, ಜ್ಯೋತಿ, ಮಂಜುನಾಥ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ್ ಎಸ್.ವಿ. ಸ್ವಾಗತಿಸಿದರು. ಗಣೇಶ್ ಸಟ್ವಾಡಿ ವಂದಿಸಿದರು.