ಮುಂಡಾಜೆಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ

Update: 2021-09-19 16:25 GMT

ಬೆಳ್ತಂಗಡಿ : ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು ಬಾಳೆ, ತೆಂಗು, ಅಡಕೆ ಗಿಡಗಳ ಸಹಿತ ಸಾವಿರಾರು ರೂ. ಮೌಲ್ಯದ ಕೃಷಿ ಹಾನಿ ಉಂಟು ಮಾಡಿವೆ.

ಮುಂಡಾಜೆಯ ಧುಂಬೆಟ್ಟು ಹಾಗೂ ಹಾಲ್ತೋಟ ಪರಿಸರದಲ್ಲಿ ಕಾಡಾನೆಗಳ ಗುಂಪು ಸುಜಿತ್ ಭಿಡೆ, ವಿಶ್ವನಾಥ ಲೋಂಢೆ, ರವೀಂದ್ರ ಮರಾಠೆ, ಸುಬ್ರಾಯ ಫಡ್ಕೆ, ರವಿಕಿರಣ ಮರಾಠೆ ಮೊದಲಾದವರ ಮನೆಗಳ ಸಮೀಪವಿರುವ ಕೃಷಿ ತೋಟಗಳಿಗೆ ಲಗ್ಗೆ ಇಟ್ಟು 70ಕ್ಕಿಂತ ಅಧಿಕ ಅಡಕೆ ಗಿಡ, ನೂರಾರು ಫಲ ಬಿಟ್ಟ ಬಾಳೆಗಿಡ ಹಾಗೂ ತೆಂಗಿನ ಮರಗಳನ್ನು ಧ್ವಂಸಗೈದಿವೆ.

ಶನಿವಾರ ಬೆಳಗಿನ ಜಾವ  ರವಿಕುಮಾರ್, ರೇವತಿ, ಸಚಿನ್ ಭಿಡೆ, ಶ್ರೀಕೃಷ್ಣಭಟ್, ಉಲ್ಲಾಸ್ ಭಿಡೆ ಮೊದಲಾದವರ ತೋಟಗಳಿಗೆ ಒಂಟಿ ಸಲಗ ನುಗ್ಗಿ ಎರಡು ನೂರಕ್ಕಿಂತ ಹೆಚ್ಚಿನ ಬಾಳೆ ಗಿಡಗಳನ್ನು ನಾಶ ಮಾಡಿತ್ತು.

ರವಿವಾರ ಎರಡು ಆನೆಗಳು ಹಾಗೂ ಎರಡು ಮರಿಯಾನೆಗಳ ಸಹಿತ ದಾಳಿ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ತೋಟಗಳಲ್ಲಿ ಮೂಡಿರುವ ಹೆಜ್ಜೆ ಗುರುತುಗಳಿಂದ ತಿಳಿದುಬಂದಿದೆ. ಈ  ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News