ಆದಿತ್ಯನಾಥ್ ತಂದೆಯ ವಿರುದ್ಧ ಹೇಳಿಕೆಗಾಗಿ ಇಬ್ಬರು ಎಸ್ಪಿ ನಾಯಕರ ವಿರುದ್ಧ ಪ್ರಕರಣ

Update: 2021-09-19 16:41 GMT
photo :PTI

ಪಿಲಿಭಿತ್,ಸೆ.19: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತಂದೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಎಸ್ಪಿ ಶಾಸಕ ಹಾಗೂ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಜಪಾಲ ಕಶ್ಯಪ್ ಮತ್ತು ಪಕ್ಷದ ಪಿಲಿಭಿತ್ ಜಿಲ್ಲಾ ಘಟಕದ ಅಧ್ಯಕ್ಷ ಯೂಸುಫ್ ಕಾದ್ರಿ ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

‌ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಅವರ ದೂರಿನ ಮೇರೆಗೆ ಸುಂಗ್ರಾಹಿ ಕೋತ್ವಾಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಎಂದು ಪಿಲಿಭಿತ್ ಎಸ್ಪಿ ದಿನೇಶಕುಮಾರ್ ತಿಳಿಸಿದರು.

ಬುಧವಾರ ಪಿಲಿಭಿತ್ ನಲ್ಲಿ ನಡೆದಿದ್ದ ಹಿಂದುಳಿದ ವರ್ಗಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ‘ಅಬ್ಬಾ ಜಾನ್’ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದ ಸಂದರ್ಭ ಕಶ್ಯಪ್ ಅವರು ಆದಿತ್ಯನಾಥರ ತಂದೆಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
 
ತನಗೆ ಮುಖ್ಯಮಂತ್ರಿಗಳ ಭಯವಿಲ್ಲ,ಅವರು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿದರೆ ತಾನು ಸುಮ್ಮನಿರುವುದಿಲ್ಲ ಎಂದು ಕಶ್ಯಪ್ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 
ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು ಮತ್ತು ಈ ಸಂಬಂಧವೂ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಷಿನಗರದಲ್ಲಿ ಇತ್ತೀಚಿಗೆ ಎಸ್ಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಆದಿತ್ಯನಾಥ,ಈ ಮೊದಲು ‘ಅಬ್ಬಾ ಜಾನ್’ಎಂದು ಹೇಳುಕೊಳ್ಳುವವರು ಎಲ್ಲ ಪಡಿತರ ಸಾಮಗ್ರಿಗಳನ್ನು ಕಬಳಿಸುತ್ತಿದ್ದರು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News