960 ಕೋ.ರೂ.ವಿದೇಶಿ ಸಾಲದ ಕುರಿತು ಆಂಧ್ರ ಸರಕಾರದಿಂದ ವರದಿ ಕೇಳಿದ ಕೇಂದ್ರ‌

Update: 2021-09-19 17:21 GMT

ಅಮರಾವತಿ,ಸೆ.19: ವಿವಿಧ ಬಾಹ್ಯ ನೆರವಿನ ಯೋಜನೆ(ಇಎಪಿ)ಗಳಿಗಾಗಿ ವಿದೇಶಿ ಸಂಸ್ಥೆಗಳಿಂದ ಸಾಲವಾಗಿ ಪಡದಿರುವ 960 ಕೋ.ರೂ.ಗಳ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಕೇಂದ್ರವು ಆಂಧ್ರಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಈ ಹಣವನ್ನು ಪಡೆಯಬೇಕಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಇಲಾಖೆಗಳು ಬರಿಗೈ ದಾಸರಾಗಿದ್ದು,ಗುತ್ತಿಗೆದಾರರು ಈವರೆಗೆ ಮಾಡಿರುವ ಕಾಮಗಾರಿಗಳಿಗೆ ನೂರಾರು ಕೋಟಿ ರೂ.ಗಳು ಇನ್ನೂ ಅವರಿಗೆ ಪಾವತಿಯಾಗಿಲ್ಲ.
ಕಾಮಗಾರಿಗಳಲ್ಲಿಯ ಕಳಪೆ ಪ್ರಗತಿ ಮತ್ತು ಬಾಕಿಗಳನ್ನು ಉಳಿಸಿಕೊಂಡಿರುವದರಿಂದ ಬಾಹ್ಯ ಸಂಸ್ಥೆಗಳಿಂದ ಇನ್ನಷ್ಟು ಸಾಲಗಳನ್ನು ಪಡೆಯಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ,ಹೀಗಾಗಿ ಈಗ ಇಎಪಿಗಳು ಹಳಿತಪ್ಪಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿತ್ತ ಸಚಿವಾಲಯದ ಅಧೀನದ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ)ಯು ಕಳೆದ ವಾರ ಈ ವಿಷಯದಲ್ಲಿ ರಾಜ್ಯ ಹಣಕಾಸು ಇಲಾಖೆಯಿಂದ ವಿವರಣೆಯನ್ನು ಕೋರಿ ಪತ್ರವನ್ನು ಬರೆದಿದೆ.
ಸಾಲದ ಹಣವು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇದರಿಂದಾಗಿ ಬಡ್ಡಿ ವೆಚ್ಚವು ಹೆಚ್ಚುತ್ತಿದೆ,ಆದರೆ ಯೋಜನೆಯ ಕಾಮಗಾರಿಗಳು ಆಮೆವೇಗದಲ್ಲಿ ಸಾಗುತ್ತಿವೆ ಎಂದು ಡಿಇಎ ಪತ್ರದಲ್ಲಿ ಬೆಟ್ಟುಮಾಡಿದೆ.
 ‘ಡಿಇಎ ಅಧಿಕಾರಿಗಳು ವಿವಿಧ ಸರಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆಗಳನ್ನು ಮಾಡಿ ಕಳವಳಕಾರಿ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಕಾಮಗಾರಿಗಳ ಸ್ಥಿತಿಗತಿ ಮತ್ತು ವಿದೇಶಿ ಸಾಲಗಳ ಬಳಕೆಯ ಕುರಿತು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ಆದರೆ ನಮ್ಮ ರಿಪೋರ್ಟ್ ಕಾರ್ಡ್ ಶೂನ್ಯವಾಗಿದೆ. ಅವರು ನಮಗೆ ಹಣವನ್ನು ನೀಡಿದ್ದರು,ಆದರೆ ವಾಸ್ತವದಲ್ಲಿ ಆ ಹಣ ನಮ್ಮ ಬಳಿಯಿಲ್ಲ ಎಂದು ನಾವು ಅವರಿಗೆ ಹೇಳಲಾಗುತ್ತಿಲ್ಲ ’ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಒಂದಡೆ ರಾಜ್ಯ ಸರಕಾರವು ಸಾಲಗಳಿಗಾಗಿ ತಡಕಾಡುತ್ತಿದೆ,ಇನ್ನೊಂದೆಡೆ ಲಭ್ಯವಾದ ಸಾಲವನ್ನು ಉದ್ದೇಶಿತ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿಲ್ಲ ಎಂದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News