ಐಪಿಎಲ್-2021ರ ಬಳಿಕ ಆರ್ ಸಿಬಿ ನಾಯಕತ್ವ ತ್ಯಜಿಸಲಿರುವ ವಿರಾಟ್ ಕೊಹ್ಲಿ

Update: 2021-09-19 17:36 GMT

ಹೊಸದಿಲ್ಲಿ: ಯುಎಇನಲ್ಲಿ ರವಿವಾರದಿಂದ ಪುನರಾರಂಭವಾಗಿರುವ 14ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿ ಕೊನೆಗೊಂಡ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದೇನೆ ಎಂದು ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.

ಆರ್ ಸಿಬಿ ಫ್ರಾಂಚೈಸಿ ರವಿವಾರ  ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡುವ ಮೂಲಕ ಕೊಹ್ಲಿ ನಾಯಕನ ಸ್ಥಾನವನ್ನು ತ್ಯಜಿಸುವುದಾಗಿ ಪ್ರಕಟಿಸಿದೆ. ವೀಡಿಯೊದಲ್ಲಿ ಆರ್ ಸಿಬಿ ನಾಯಕ ತನ್ನ ನಿರ್ಧಾರದ ಕುರಿತಾಗಿ ವಿವರಣೆ ನೀಡಿದ್ದಾರೆ.  

ಕೊಹ್ಲಿ ಕೆಲವೇ ದಿನಗಳ ಹಿಂದೆ ಟ್ವೆಂಟಿ-20 ಕ್ರಿಕೆಟ್ ನಾಯಕತ್ವವನ್ನು ಮುಂಬರುವ ವಿಶ್ವಕಪ್ ಬಳಿಕ ತ್ಯಜಿಸುವುದಾಗಿ ಘೋಷಿಸಿದ್ದರು.

"ಆರ್‌ಸಿಬಿಯ ನಾಯಕನಾಗಿ ಇದು ನನ್ನ ಕೊನೆಯ ಐಪಿಎಲ್. ನನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವವರೆಗೂ ನಾನು ಆರ್‌ಸಿಬಿ ಆಟಗಾರನಾಗಿ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಹಾಗೂ ನನ್ನನ್ನು ಬೆಂಬಲಿಸಿದ ಎಲ್ಲ ಆರ್‌ಸಿಬಿ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದು ಕೊಹ್ಲಿ ಅವರು ಹೇಳಿದರು.

ಕೊಹ್ಲಿ 2008 ರಿಂದ ಆರ್‌ಸಿಬಿಯಲ್ಲಿದ್ದಾರೆ ಹಾಗೂ 2013 ರಿಂದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

7 ಪಂದ್ಯಗಳಲ್ಲಿ 10 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ ಸಿಬಿ ಈಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಬೆಂಗಳೂರು ತಂಡ ಸೋಮವಾರ ಕೆಕೆಆರ್ ಅನ್ನು ಎದುರಿಸುವ ಮೂಲಕ ಐಪಿಎಲ್-2021ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News