ಸ್ಪೇಸ್ ಎಕ್ಸ್ ಮೂಲಕ 3 ದಿನದ ಬಳಿಕ ಕಕ್ಷೆಯಿಂದ ಭೂಮಿಗೆ ಮರಳಿದ ಪ್ರವಾಸಿಗರು

Update: 2021-09-19 18:17 GMT
photo: PTI

ವಾಷಿಂಗ್ಟನ್, ಸೆ.19: ಮೂರು ದಿನದ ಹಿಂದೆ ಸ್ಪೇಸ್ಎಕ್ಸ್ ಕ್ಯಾಪ್ಸೂಲ್ ಮೂಲಕ ಬಾಹ್ಯಾಕಾಶಕ್ಕೆ ನೆಗೆದಿದ್ದ 4 ಪ್ರವಾಸಿಗರು ರವಿವಾರ ಫ್ಲೋರಿಡಾದ ಕರಾವಳಿಗೆ ಬಂದಿಳಿದಿದ್ದು ಇದರೊಂದಿಗೆ ಯಾವುದೇ ವೃತ್ತಿಪರ ಗಗನಯಾತ್ರಿಗಳನ್ನು ಹೊಂದಿರದ ಪ್ರಪ್ರಥಮ ಬಾಹ್ಯಾಕಾಶ ಯಾತ್ರೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕೋಟ್ಯಾಧಿಪತಿ ಉದ್ಯಮಿ ಜೆರಾಡ್ ಇಸಾಕ್ಮನ್ ಈ ಪ್ರವಾಸದ ಪ್ರಾಯೋಜಕರಾಗಿದ್ದು ಅವರ ಜತೆ ಸಿಯಾನ್ ಪ್ರಾಕ್ಟರ್(ಪೈಲಟ್), 29 ವರ್ಷದ ನರ್ಸ್ ಹ್ಯಾಲಿ ಅರ್ಸೆನಾಕ್ಸ್, ಅಮೆರಿಕ ವಾಯುಪಡೆಯ ನಿವೃತ್ತ ಅಧಿಕಾರಿ ಕ್ರಿಸ್ ಸೆಂಬ್ರೋಸ್ಕಿ ಈ ಚಾರಿತ್ರಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

ಬಾಹ್ಯಾಕಾಶದತ್ತ ಜನರನ್ನು ಸಾಗಿಸಲು ಮತ್ತು ಬಾಹ್ಯಾಕಾಶದಲ್ಲಿ ಮಾನವ ಜೀವನಕ್ಕೆ ನೆರವಾಗಲು ವಿನ್ಯಾಸಗೊಳಿಸಿರುವ ಬಾಹ್ಯಾಕಾಶ ನೌಕೆಯನ್ನು ಸ್ಪೇಸ್ಕ್ಯಾಪ್ಸೂಲ್ ಎಂದು ಕರೆಯಲಾಗುತ್ತದೆ.

ಸ್ಪೇಸ್ಎಕ್ಸ್ ಕ್ಯಾಪ್ಸೂಲ್ ನ ಒಳಗೆ ತಾವು 4 ಮಂದಿ ಇರುವ ವೀಡಿಯೊವನ್ನು ಟ್ವೀಟ್ ಮಾಡಿರುವ ಪ್ರಾಕ್ಟರ್, ಈ ಚಾರಿತ್ರಿಕ ಯೋಜನೆಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಸ್ಪೇಸ್ಎಕ್ಸ್ ಕ್ಯಾಪ್ಸೂಲ್ನಿಂದ ಹೊರಬರುತ್ತಿರುವ ಫೋಟೋ ರವಾನಿಸಿರುವ ಅವರು ‘ನಾವಿದನ್ನು ಸಾಧಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ. ಈಕೆ ಪೈಲಟ್ ಆಗಿ ಆಯ್ಕೆಯಾಗುವ ಮುನ್ನ ವಿಜ್ಞಾನಿ ಮತ್ತು ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿದ್ದರು.

ಮೂರು ದಿನ ಬಾಹ್ಯಾಕಾಶದಲ್ಲಿದ್ದ ಕ್ಯಾಪ್ಸೂಲ್, ಪ್ರತೀ ದಿನ ಭೂಮಿಯನ್ನು 15ಕ್ಕೂ ಹೆಚ್ಚು ಬಾರಿ ಸುತ್ತುಹೊಡೆದಿದೆ. ರವಿವಾರ ಬೆಳಿಗ್ಗೆ ಅಟ್ಲಾಂಟಿಕ್ ಸಾಗರದ ಬಳಿ ಭೂಮಿಯ ಕಕ್ಷೆಯನ್ನು ಪ್ರವೇಶಿಸಿದ ಬಳಿಕ ಅದರ 4 ಪ್ಯಾರಾಶೂಟ್ ಗಳು ಬಿಚ್ಚಿಕೊಂಡು ಕ್ಯಾಪ್ಸೂಲ್ ನ ವೇಗವನ್ನು ಕ್ರಮೇಣ ನಿಧಾನಗೊಳಿಸಲು ನೆರವಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News