ಇರಾನ್ ನ ತೈಲ ಸಾಗಣೆಯಿಂದ ಲೆಬನಾನ್ ನ ಸಾರ್ವಭೌಮತೆಯ ಉಲ್ಲಂಘನೆ: ಪ್ರಧಾನಿ ಮಿಕಾತಿ

Update: 2021-09-19 17:55 GMT

ಬೈರೂತ್, ಸೆ.19: ಲೆಬನಾನ್ ನ ಹೆಝ್ಬೊಲ್ಲ ಸಂಘಟನೆ ಇರಾನ್ನಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಲೆಬನಾನ್ನ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ ಎಂದು ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.

ಇರಾನ್ನಿಂದ ಹಡಗುಗಳ ಮೂಲಕ ತೈಲವನ್ನು ಗುರುವಾರದಿಂದ ಆಮದು ಮಾಡಿಕೊಳ್ಳುತ್ತಿರುವುದಾಗಿ ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಸಂಘಟನೆಯಾಗಿರುವ ಹೆಝ್ಬೊಲ್ಲ ಹೇಳಿದ್ದು, ಇದು ಲೆಬನಾನ್ನಲ್ಲಿ ತೀವ್ರಗೊಳ್ಳುತ್ತಿರುವ ತೈಲ ಬಿಕ್ಕಟ್ಟನ್ನು ತುಸು ನಿರಾಳಗೊಳಿಸಲಿದೆ ಎಂದಿದೆ. ಇರಾನ್ನಿಂದ ತೈಲ ಸರಕು ಹೊತ್ತ ನೌಕೆಯೊಂದು ಸಿರಿಯಾದ ಮೂಲಕ ಲೆಬನಾನ್ ತಲುಪಿದೆ. ಇರಾನ್ ಮತ್ತು ಸಿರಿಯಾ ಎರಡೂ ದೇಶಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

ಈ ತೈಲ ಆಮದು ವ್ಯವಹಾರದಲ್ಲಿ ಲೆಬನಾನ್ ಸರಕಾರದ ಪಾತ್ರ ಇರದ ಕಾರಣ, ದೇಶದ ಮೇಲೆ ಯಾವುದೇ ರೀತಿಯ ನಿರ್ಬಂಧ ವಿಧಿಸುವ ಸಾಧ್ಯತೆಯಿಲ್ಲ ಎಂದು ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ. ಈ ಮಧ್ಯೆ, ಪೂರ್ವದ ಬೆಕಾ ಕಣಿವೆಯಲ್ಲಿ ಟ್ರಕ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 20 ಟನ್ಗಳಷ್ಟು ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಲೆಬನಾನ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಬೆರೂತ್ ಬಂದರಿನಲ್ಲಿ ಸಂಭವಿಸಿದ್ದ ಭೀಕರ ಬಾಂಬ್ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮೂಲ ಕಾರಣವಾಗಿತ್ತು.

ಲೆಬನಾನ್ ಮತ್ತು ಸಿರಿಯಾ ನಡುವಿನ ಕಳ್ಳಸಾಗಾಣಿಕೆಯ ಕೇಂದ್ರಬಿಂದು ಎಂದು ಪರಿಗಣಿಸಲಾಗಿರುವ ಬೆಕಾ ಕಣಿವೆಯಾದ್ಯಂತ ದಾಳಿ ಮತ್ತು ಶೋಧ ಕಾರ್ಯಾಚರಣೆ ತೀವ್ರಗೊಳಿಸುವಂತೆ ಲೆಬನಾನ್ನ ಒಳಾಡಳಿತ ಸಚಿವ ಬಸ್ಸಾಂ ಮವ್ಲಾವಿ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News