ಫಿಲಿಪ್ಪೀನ್ಸ್: ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲಿರುವ ಬಾಕ್ಸರ್ ಮ್ಯಾನಿ ಪಾಖಿಯಾವೊ

Update: 2021-09-29 05:55 GMT

ಮನಿಲಾ, ಸೆ.19: ಸಾರ್ವಕಾಲಿಕ ಮಹೋನ್ನತ ಬಾಕ್ಸರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮತ್ತು 8 ಬಾರಿ ಬಾಕ್ಸಿಂಗ್ ವಿಶ್ವಚಾಂಪಿಯನ್ ಆಗಿರುವ ಫಿಲಿಪ್ಪೀನ್ಸ್ನ ಮ್ಯಾನಿ ಪಾಖಿಯಾವೊ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರವಿವಾರ ಘೋಷಿಸಿದ್ದಾರೆ.

 ‌
ಆಡಳಿತಾರೂಢ ಪಿಡಿಪಿ-ಲಬಾನ್ ಮೈತ್ರಿಪಕ್ಷದ ಭಾಗವಾಗಿರುವ , ಪಾಖಿಯಾವೊ ನೇತೃತ್ವದ ಪಕ್ಷವು ಸಂಸತ್ತಿನಲ್ಲಿ ಅಧ್ಯಕ್ಷ ಹುದ್ದೆಗೆ ಪಾಖಿಯಾವೊ ಹೆಸರನ್ನು ಸೂಚಿಸಿದಾಗ ಅದಕ್ಕೆ ಪಾಖಿಯಾವೊ ಸಮ್ಮತಿಸಿದರು. ‘ನಾನೊಬ್ಬ ಹೋರಾಟಗಾರ ಮತ್ತು ಬಾಕ್ಸಿಂಗ್ ಆಖಾಡದ ಒಳಗಿರಲಿ ಅಥವಾ ಹೊರಗಿರಲಿ, ಯಾವತ್ತೂ ಹೋರಾಟ ಮುಂದುವರಿಸುತ್ತೇನೆ’ ಎಂದು ಘೋಷಿಸಿದರು.

 ಹಾಲಿ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟ್ ಸರಕಾರ ತೀವ್ರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಪಾಖಿಯಾವೊ, ಡ್ಯುಟೆರ್ಟ್ ಚೀನಾದೊಂದಿಗೆ ಸ್ನೇಹಶೀಲ ಸಂಬಂಧ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಸಾಂಕ್ರಾಮಿಕದ ನಿರ್ವಹಣೆಗೆಂದು ಸಂಗ್ರಹಿಸಿದ್ದ ಸುಮಾರು 200 ಮಿಲಿಯನ್ ಡಾಲರ್ ಮೊತ್ತವನ್ನು ಸರಕಾರ ದುರ್ಬಳಕೆ ಮಾಡಿಕೊಂಡಿದ್ದು ಇಂತಹ ಇನ್ನಷ್ಟು ಪ್ರಕರಣಗಳನ್ನು ಶೀಘ್ರ ಬಯಲಿಗೆಳೆಯಲಾಗುವುದು ಎಂದು ಈ ಹಿಂದೆ ಡ್ಯುಟೆರ್ಟ್ ಅವರ ನಿಕಟವರ್ತಿಯಾಗಿದ್ದ ಪಾಖಿಯಾವೊ ಹೇಳಿದ್ದಾರೆ.

 ಇದನ್ನು ನಿರಾಕರಿಸಿರುವ ಡ್ಯುಟೆರ್ಟ್, ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಡೆಸುವುದರ ಬದಲು, ತನ್ನ ಆರೋಪವನ್ನು ಪಾಖಿಯಾವೊ ಪುರಾವೆ ಸಹಿತ ದೃಢಪಡಿಸಲಿ ಎಂದು ಸವಾಲು ಹಾಕಿದ್ದಾರೆ.

    ಮೈತ್ರಿಕೂಟದ ಮತ್ತೊಂದು ಪಕ್ಷವು ಡ್ಯುಟೆರ್ಟ್ ಅವರ ದೀರ್ಘಾವಧಿ ನಿಕಟವರ್ತಿ ಕ್ರಿಸ್ಟೋಫರ್ ‘ಬಾಂಗ್’ ಗೊ ರನ್ನು ಅಭ್ಯರ್ಥಿ ಹುದ್ದೆಗೆ ಶಿಫಾರಸು ಮಾಡಿದೆ. ಇದೇ ವೇಳೆ ಡ್ಯುಟೆರ್ಟ್ರನ್ನು ಉಪಾಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲಾಗಿದ್ದು, ಇದು ಅಧಿಕಾರದಲ್ಲಿ ಮುಂದುವರಿಯುವ ಡ್ಯುಟೆರ್ಟ್ ತಂತ್ರಗಾರಿಕೆಯಾಗಿದೆ ಎಂದು ಟೀಕೆ ವ್ಯಕ್ತವಾಗಿದೆ. ಫಿಲಿಪ್ಪೀನ್ಸ್ ಸಂವಿಧಾನದಲ್ಲಿ ಸತತ ದ್ವಿತೀಯ ಬಾರಿ 6 ವರ್ಷಾವಧಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವಂತಿಲ್ಲ. ಬಾಂಗ್ ಗೊ ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಲು ನಿರಾಕರಿಸಿದ್ದಾರೆ.

ಪಾಖಿಯಾವೊ ಜನಪ್ರಿಯವಾಗಿದ್ದರೂ, ಅಧ್ಯಕ್ಷೀಯ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಾಗಿ ನಡೆದ ಸಮೀಕ್ಷೆಯಲ್ಲಿ ಡ್ಯುಟೆರ್ಟ್ ಪುತ್ರಿ ಸಾರಾ ಡ್ಯುಟೆರ್ಟ್ ಕಾರ್ಪಿಯೊ ಅವರ ಎದುರು ಹಿನ್ನಡೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News