ಮ್ಯಾನ್ಮಾರ್: ಸೇನಾ ವಾಹನಪಡೆಯ ಮೇಲೆ ಬಾಂಬ್ ಎಸೆತ

Update: 2021-09-19 17:56 GMT

 ಯಾಂಗ್ಯಾಂಗ್, ಸೆ.19: ಯಾಂಗ್ಯಾಂಗ್ನ ಉಪನಗರ ಖಯಾನ್ನ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಸಾಲನ್ನು ಗುರಿಯಾಗಿಸಿ ಕಚ್ಛಾಬಾಂಬ್ ದಾಳಿ ನಡೆಸಲಾಗಿದೆ ಎಂದು ಮ್ಯಾನ್ಮಾರ್ನ ಸೇನಾಡಳಿತ ಶನಿವಾರ ಹೇಳಿದೆ.

 ಆಡಳಿತ ವಿರೋಧಿ ಗುಂಪು ಈ ದಾಳಿ ನಡೆಸಿದ್ದು ಬಳಿಕ ಸೇನಾ ಪಡೆ ಮತ್ತು ವಿರೋಧಿ ಬಣಗಳ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು ಹಲವರು ಮೃತಪಟ್ಟಿದ್ದಾರೆ. ಭದ್ರತಾ ಪಡೆಯ ಓರ್ವ ಸಿಬಂದಿ ಗಾಯಗೊಂಡಿದ್ದಾನೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನಾಪಡೆಯ ಮಾಹಿತಿಯನ್ನಾಧರಿಸಿ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಹಲವು ಭಯೋತ್ಪಾದಕರು ಹತರಾಗಿದ್ದು ಓರ್ವ ಗಾಯಗೊಂಡಿದ್ದಾನೆ ಎಂದು ಸೇನಾಪಡೆ ಟ್ವೀಟ್ ಮಾಡಿದೆ.

ಫೆಬ್ರವರಿಯಲ್ಲಿ ಕ್ಷಿಪ್ರಸೇನಾ ಕ್ರಾಂತಿಯ ಮೂಲಕ ಆ್ಯಂಗ್ ಸೂಕಿ ಪಕ್ಷದ ಸರಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರ ಪಡೆದಿತ್ತು. ಇದೀಗ ದೇಶದಲ್ಲಿ ಸೇನಾಡಳಿತದ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದ್ದು ನಿರಂತರ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ, ಸೂಕಿ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ‘ರಾಷ್ಟ್ರೀಯ ಏಕತಾ ಸರಕಾರ’ ರಚನೆಯಾಗಿದ್ದು ಸೇನಾಡಳಿತದ ವಿರುದ್ಧ ದಂಗೆಯೇಳುವಂತೆ ಜನತೆಗೆ ಕರೆ ನೀಡಿದೆ. ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು ವಿರೋಧವನ್ನು ಹತ್ತಿಕ್ಕಲು ಸೇನಾಪಡೆ ಬಲಪ್ರಯೋಗಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಗಾಯಿಂಗ್ ಮತ್ತು ಮಾಗ್ವೇ ಪ್ರದೇಶದಲ್ಲಿ ಘರ್ಷಣೆ ಭುಗಿಲೆದ್ದಿದ್ದು ಸೇನಾಪಡೆ ಹಲವು ಮನೆಗಳಿಗೆ ಬೆಂಕಿಹಚ್ಚಿದ್ದು ಸಾವಿರಾರು ಮಂದಿ ಅಲ್ಲಿಂದ ಓಡಿಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾಗ್ವೇಯ ಗಾಂಗ್ವಾ ಉಪನಗರದಲ್ಲಿರುವ ಎಲ್ಲಾ ಮನೆಗಳನ್ನೂ ಸುಟ್ಟುಬಿಡಲು ಸೇನೆ ಮುಂದಾಗಿತ್ತು. ಆದರೆ ಮಳೆ ಸುರಿಯುತ್ತಿದ್ದ ಕಾರಣ ಹಲವು ಮನೆಗಳು ಉಳಿದುಕೊಂಡಿವೆ. ಸೇನೆಯ ದೌರ್ಜನ್ಯದಿಂದ ಬೆದರಿದ ಸುಮಾರು 4000 ನಿವಾಸಿಗಳು ಸಮೀಪದ ಅರಣ್ಯಕ್ಕೆ ಪಲಾಯನ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News