ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಉದ್ದೇಶ: ಟರ್ಕಿ ಅಧ್ಯಕ್ಷ ಎರ್ಡೋಗನ್ ಅಮೆರಿಕಾ ಭೇಟಿ

Update: 2021-09-19 18:15 GMT

ಇಸ್ತಾನ್ಬುಲ್, ಸೆ.19: ಅಫ್ಗಾನಿಸ್ತಾನದ ಬೆಳವಣಿಗೆಯ ಬಳಿಕ ಅಮೆರಿಕಾದೊಂದಿಗಿನ ಸಂಬಂಧ ಸುಧಾರಿಸುತ್ತಿರುವ ನಡುವೆಯೇ, ಟರ್ಕಿಯ ಅಧ್ಯಕ್ಷ ರೆಸೆಪ್ ತಯೀಪ್ ಎರ್ಡೋಗನ್ ನ್ಯೂಯಾರ್ಕ್ಗೆ ಭೇಟಿ ನೀಡುತ್ತಿದ್ದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ರೊಂದಿಗೆ ವಿಸ್ತತ ಮಾತುಕತೆ ನಡೆಸಲಿದ್ದಾರೆ ಎಂದು ಟರ್ಕಿ ಸರಕಾರದ ಮೂಲಗಳು ಹೇಳಿವೆ.

ರವಿವಾರ ಅಮೆರಿಕದಲ್ಲಿ ನಡೆಯುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಎರ್ಡೋಗನ್ ತೆರಳಿದ್ದಾರೆ. ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್ರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಅಫ್ಗಾನಿಸ್ತಾನದ ಇತ್ತೀಚಿನ ಬೆಳವಣಿಗೆಯ ಬಳಿಕ ಅಲ್ಲಿ ಟರ್ಕಿ ಪ್ರಮುಖ ಪಾತ್ರ ನಿರ್ವಹಿಸುವ ಬಗ್ಗೆ ಅವರು ಬೈಡೆನ್ರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಯಿದೆ ಎಂದು ಲಂಡನ್ ಮೂಲದ ವಿದೇಶಿ ಕಾರ್ಯನೀತಿ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಎಮ್ರೆ ಕ್ಯಾಲಿಸ್ಕನ್ ಹೇಳಿದ್ದಾರೆ.

   ಕಾಬೂಲ್ ವಿಮಾನ ನಿಲ್ದಾಣದ ಭದ್ರತಾ ಕಾರ್ಯದಲ್ಲಿ ಟರ್ಕಿ ವಹಿಸಲಿರುವ ಪಾತ್ರದ ಬಗ್ಗೆ ಜೂನ್ನಲ್ಲಿ ನಡೆದಿದ್ದ ನ್ಯಾಟೊ ಶೃಂಗಸಭೆಯಲ್ಲಿ ಎರ್ಡೋಗನ್ ಪ್ರಸ್ತಾವಿಸಿದ್ದರು. ಇದೀಗ ಅಫ್ಗಾನಿಸ್ತಾನವನ್ನು ಮುಂದಿಟ್ಟುಕೊಂಡು ಅಮೆರಿಕದೊಂದಿಗಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಎರ್ಡೋಗನ್ ಪ್ರಯತ್ನಿಸಬಹುದು. ಟರ್ಕಿಯೊಂದಿಗಿನ ಸಹಕಾರ ಸಂಬಂಧದಿಂದ ಅಮೆರಿಕಕ್ಕೂ ಪ್ರಯೋಜನವಿದೆ. ಉಭಯ ದೇಶಗಳೂ ಸಮಾನ ಹಿತಾಸಕ್ತಿ ಹೊಂದಿವೆ ಎಂದು ಮನವರಿಕೆ ಮಾಡಬಹುದು. ಟರ್ಕಿಯೊಂದಿಗಿನ ಸಹಕಾರ ಸಂಬಂಧದಿಂದ ಈಗಲೂ ಪ್ರಯೋಜನಗಳಿವೆ ಎಂದು ಪಾಶ್ಚಿಮಾತ್ಯ ದೇಶಗಳಿಗೆ ವಿವರಿಸಲು ಅಫ್ಗಾನ್ನ ಬೆಳವಣಿಗೆಯನ್ನು ನಿದರ್ಶನವಾಗಿ ಬಳಸುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 ಟರ್ಕಿಯು ರಶ್ಯಾದ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡ ಬಳಿಕ ಟರ್ಕಿ-ಅಮೆರಿಕ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಕೆಲ ತಿಂಗಳ ಹಿಂದೆ ಸುದ್ದಿಗೋಷ್ಟಿಯಲ್ಲಿ ಟರ್ಕಿಯ ಬಗ್ಗೆ ಪ್ರಸ್ತಾವಿಸಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ‘ಅಮೆರಿಕದ ಸಹಭಾಗಿ ಎಂದು ಹೇಳಲಾದ ಟರ್ಕಿ’ ಎಂದಿದ್ದರು. ನೇಟೋದ ಕ್ಷಿಪಣಿಗಳ ಬದಲು ರಶ್ಯಾದ ಎಸ್-400 ಕ್ಷಿಪಣಿಗಳನ್ನು ಟರ್ಕಿ ಖರೀದಿಸಿದ ಹಿನ್ನೆಲೆಯಲ್ಲಿ ಟರ್ಕಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳಿಗೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಬೈಡೆನ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸುಮಾರು 3 ತಿಂಗಳ ಬಳಿಕ ಟರ್ಕಿ ಅಧ್ಯಕ್ಷರೊಂದಿಗೆ ಮೊದಲ ಬಾರಿ ಮಾತುಕತೆ ನಡೆಸಿದ್ದರು.

ಈಶಾನ್ಯ ಸಿರಿಯಾದ ಕುರ್ಡಿಶ್ ಹೋರಾಟಗಾರರಿಗೆ ಅಮೆರಿಕ ನೆರವು ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಟರ್ಕಿ, 2016ರಲ್ಲಿ ಸರಕಾರದ ವಿರುದ್ಧ ಷಡ್ಯಂತ್ರ ರೂಪಿಸಿದ್ದ ಆರೋಪಕ್ಕೆ ಒಳಗಾಗಿ ಅಮೆರಿಕಕ್ಕೆ ಪಲಾಯನ ಮಾಡಿದ್ದ ಫೆಥುಲಾ ಗುಲೆನ್ರನ್ನು ಟರ್ಕಿಗೆ ಗಡೀಪಾರು ಮಾಡುವಂತೆ ಅಮೆರಿಕಾವನ್ನು ಆಗ್ರಹಿಸಿತ್ತು. ಇದನ್ನು ಅಮೆರಿಕ ತಿರಸ್ಕರಿಸಿದ ಬಳಿಕ ಉಭಯ ದೇಶಗಳ ಸಂಬಂಧ ಹದಗೆಡುತ್ತಾ ಹೋಗಿತ್ತು. ಇದೀಗ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಅಫ್ಗಾನ್ನ ಬೆಳವಣಿಗೆ ಪೂರಕವಾಗಿ ಒದಗಿಬಂದಿದ್ದು ಇದರ ಪ್ರಯೋಜನ ಪಡೆಯುವುದು ಟರ್ಕಿಯ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News