ಇಸ್ರೇಲ್ ಸೇನೆಯಿಂದ ಪೆಲೆಸ್ತೀನಿಯರ ಸಾಮೂಹಿಕ ಬಂಧನ ಕಾರ್ಯಾಚರಣೆ

Update: 2021-09-19 18:16 GMT

ರಮಲ್ಲಾ, ಸೆ.19: ಸೆಪ್ಟಂಬರ್ 6ರಂದು ಇಸ್ರೇಲ್ನ ಉತ್ತರದಲ್ಲಿರುವ ಬಿಗಿಭದ್ರತೆಯ ಜೈಲಿನಿಂದ 6 ಪೆಲೆಸ್ತೀನ್ ಪ್ರಜೆಗಳು ತಪ್ಪಿಸಿಕೊಂಡು ಪರಾರಿಯಾದಂದಿನಿಂದ ಇಸ್ರೇಲ್ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪೆಲೆಸ್ತೀನೀಯರ ಸಾಮೂಹಿಕ ಬಂಧನ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ವರದಿಯಾಗಿದೆ.

ಕಳೆದ 12 ದಿನಗಳಲ್ಲಿ 100ಕ್ಕೂ ಹೆಚ್ಚು ಪೆಲೆಸ್ತೀನ್ ಪ್ರಜೆಗಳನ್ನು ಸೆರೆಮನೆಗೆ ತಳ್ಳಲಾಗಿದೆ ಎಂದು ಪಿಎಲ್ಒದ ಸಂಧಾನ ವ್ಯವಹಾರಗಳ ಇಲಾಖೆ ಮತ್ತು ಪೆಲೆಸ್ತೀನಿಯನ್ ಕೈದಿಗಳ ಸಂಘಟನೆ ‘ಅದ್ದಾಮೀರ್’ ವರದಿ ಮಾಡಿದೆ. ಸೆರೆಮನೆಯಿಂದ ತಪ್ಪಿಸಿಕೊಂಡ ಘಟನೆಯ ಬಳಿಕ ಪ್ರತೀ ದಿನ ಸರಾಸರಿ 14 ಪೆಲೆಸ್ತೀನಿಯರ ಬಂಧನವಾಗಿದೆ. ಇಸ್ರೇಲ್ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿರುವ ಪೆಲೆಸ್ತೀನ್ ಪ್ರಜೆಗಳು ಇದರಲ್ಲಿ ಸೇರಿಲ್ಲ ಎಂದು ಅದ್ದಾಮೀರ್ನ ಮಿಲೆನ ಅನ್ಸಾರಿ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

ರವಿವಾರ ಇಬ್ಬರು ಪೆಲೆಸ್ತೀನಿಯರು ಇಸ್ರೇಲ್ ಸೇನೆಗೆ ಶರಣಾಗುವುದರೊಂದಿಗೆ ಜೈಲಿನಿಂದ ತಪ್ಪಿಸಿಕೊಂಡಿದ್ದ 6 ಕೈದಿಗಳೂ ಮರಳಿ ಇಸ್ರೇಲ್ ನ ಜೈಲಿಗೆ ಸೇರ್ಪಡೆಗೊಂಡಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡಿದ್ದವರ ಬೆನ್ನು ಬಿದ್ದಿದ್ದ ಇಸ್ರೇಲ್ ಪಡೆಗಳು ತಪ್ಪಿಸಿಕೊಂಡವರ ಕುಟುಂಬದವರ ಮನೆಯಿರುವ ಜೆನಿನ್ ಪ್ರದೇಶಕ್ಕೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಹಲವರನ್ನು ಬಂಧಿಸಿ ವಿಚಾರಣೆಯ ನೆಪದಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ರಮಲ್ಲಾ, ಹೆಬ್ರೋನ್, ನಬ್ಲೂಸ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲೂ ದಾಳಿ, ಶೋಧ ಕಾರ್ಯಾಚರಣೆ ನಡೆದಿದೆ.

ಮಕ್ಕಳನ್ನೂ ಇಸ್ರೇಲ್ ಪಡೆಗಳು ಬಂಧಿಸಿವೆ. ರಮಲ್ಲಾದ ಬಳಿಯ ನಿಲಿನ್ ನಗರದ ನಿವಾಸಿಯಾಗಿದ್ದ 13 ವರ್ಷದ ಮುಸ್ತಾಫ ಅಮೀರ ಮತ್ತವನ ಸೋದರ ಸಂಬಂಧಿ 15 ವರ್ಷದ ಮುಹಮ್ಮದ್ ಎಂಬವರನ್ನು ಸುಮಾರು 10 ಇಸ್ರೇಲ್ ಪೊಲೀಸರು ಬಂಧಿಸಿ, ವಿಚಾರಣೆಯ ನೆಪದಲ್ಲಿ ನೀರು ಕೂಡಾ ನೀಡದೆ ಹಿಂಸಿಸಿದ್ದಾರೆ ಎಂದು ಮುಸ್ತಾಫನ ತಂದೆ ಖಲೀಲ್ ಅಮೀರ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ. ಬಾಲಕರ ಮೇಲೆ ಸಶಸ್ತ್ರ ಸೈನಿಕರು ಹಲ್ಲೆ ನಡೆಸುವ ಅಗತ್ಯವೇನಿದೆ. ಮಕ್ಕಳ ಮೇಲೆ ದೂರುಗಳಿದ್ದರೆ ಪ್ರಕರಣ ದಾಖಲಿಸಲಿ, ಆದರೆ ನಿರ್ದಯವಾಗಿ ಥಳಿಸುವುದು ಸರಿಯೇ ಎಂದು ಖಲೀಲ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News