ಕಡಬ ತಾಲೂಕಿನ ಮರಿಯಮ್ಮಗೆ 2020ನೇ ಸಾಲಿನ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೆಲ್ ಅವಾರ್ಡ್

Update: 2021-09-20 09:55 GMT

ಕಡಬ: ಹೊಸಕೋಟೆ ತಾಲೂಕಿನ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ (ಎಎನ್ಎಂ), ಮೂಲತಃ ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಮರಿಯಮ್ಮ ಅವರಿಗೆ 2020ನೇ ಸಾಲಿನ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೆಲ್ ಅವಾರ್ಡ್ ಲಭಿಸಿದೆ.

ಕೋವಿಡ್ ಕಾರಣದಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜರಗಿದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರಸ್ತುತ ಮರಿಯಮ್ಮ ಅವರು ವರ್ಗಾವಣೆಗೊಂಡು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ಲಭಿಸಿದ್ದು, ದೇಶಾದ್ಯಂತ ಈ ಪ್ರಶಸ್ತಿಗೆ ಒಟ್ಟು 51 ಮಂದಿ ಆಯ್ಕೆಗೊಂಡಿದ್ದರು. ರಾಷ್ಟ್ರೀಯ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಮೂಲಕ ಸಮಾಜಕ್ಕೆ ನೀಡಿದ ಮಹತ್ವದ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ಲಭಿಸಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಚಾಕೋ ಮತ್ತು ಅನ್ನಮ್ಮ ದಂಪತಿಯ ಪುತ್ರಿ ಮರಿಯಮ್ಮ ಅವರು ಬೆಳ್ತಂಗಡಿ ಆರೋಗ್ಯ ಕೇಂದ್ರದಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗವಾಗಿದ್ದರು. ಕಳೆದ 30 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 2007ರಲ್ಲಿ ಉತ್ತಮ ಹೆಲ್ತ್ ಅಸಿಸ್ಟೆಂಟ್ ಅವಾರ್ಡ್, 2011ರಲ್ಲಿ ಬೆಸ್ಟ್‌ ಸಬ್‌ ಸೆಂಟರ್‌ ಅವಾರ್ಡ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News