ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಪ್ರಕರಣ: ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸಹಿತ ಮೂವರ ಬಂಧನ

Update: 2021-09-20 13:51 GMT

ಮಂಗಳೂರು, ಸೆ.20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವಶದಲ್ಲಿದ್ದ ಮೂವರನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ, ಕುಳಾಯಿ ನಿವಾಸಿ ರಾಜೇಶ್ ಪವಿತ್ರನ್ (40), ಅಡ್ಕಾರು ನಿವಾಸಿ ಸಂದೀಪ್ ಗಣೇಶ್ ಶೆಟ್ಟಿ (40), ಬಂಟ್ವಾಳದ ಕರಿಂಗಳ ನಿವಾಸಿ ಪ್ರೇಮ್ ರಾಜೇಶ್ ಶೆಟ್ಟಿ (48) ಬಂಧಿತ ಆರೋಪಿಗಳು. ಈಗಾಗಲೇ ಉರ್ವ ನಿವಾಸಿ, ಅಖಿಲ ಭಾರತ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ (53) ನನ್ನು ರವಿವಾರವೇ ಬಂಧಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ಧರ್ಮೇಂದ್ರ ವಿರುದ್ಧ ಈಗಾಗಲೇ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2019ರಲ್ಲಿ ನಾಥೂರಾಮ್ ಗೋಡ್ಸೆ ಜನ್ಮ ದಿನಾಚರಣೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಪ್ರಸರಿಸಿದ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎರಡನೇ ಆರೋಪಿ ರಾಜೇಶ್ ಪವಿತ್ರನ್ ಎಂಬಾತನು 2017ರಂದು ಡಿಸೆಂಬರ್ 22ರಂದು ಕರಾವಳಿ ಉತ್ಸವದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಅವರ ಮೇಲೆ ಮೊಟ್ಟೆಗಳನ್ನು ಎಸೆದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 109, 511ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಹನಿಟ್ಟ್ರಾಪ್ ನಡೆಸಿದ ಬಗ್ಗೆ ಈತನ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 120(ಬಿ), 365, 342, 323, 395, 385, 506 ಜೊತೆಗೆ 149ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ರಾಜೇಶ್ ವಿರುದ್ಧ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರನೇ ಆರೋಪಿ ಸಂದೀಪ್ ವಿರುದ್ಧ ಸುಮಾರು ಒಂಬತ್ತು ವರ್ಷಗಳ ಹಿಂದೆ ಗಾಡಿಗೆ ಬೆಂಕಿ ಹಚ್ಚಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಖುಲಾಸೆಗೊಂಡಿದೆ. ಆರೋಪಿಗಳಾದ ಕಮಲಾಕ್ಷ ಪಡೀಲ್, ಸುಧಾಕರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಉಲ್ಲಾಸ್ ಎಂಬವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News