ದ್ವಿತೀಯ ಪಿಯು ಫಲಿತಾಂಶ: ಉಡುಪಿ ಜಿಲ್ಲೆಗೆ ಶೇ. 35.79 ಫಲಿತಾಂಶ

Update: 2021-09-20 14:40 GMT

ಉಡುಪಿ, ಸೆ. 20: 2020-21ನೇ ಸಾಲಿನಲ್ಲಿ ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿದ ಫ್ರಶರ್ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕಳೆದ ತಿಂಗಳು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.35.79 ಫಲಿತಾಂಶ ದಾಖಲಿಸಿದೆ.

ಎಲ್ಲಾ ವಿದ್ಯಾರ್ಥಿಗಳು ಸೇರಿ ಒಟ್ಟು 299 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 107 ಮಂದಿ ತೇರ್ಗಡೆಗೊಂಡಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ತಿಳಿಸಿದೆ.

ಫ್ರಶರ್‌ಗಳೆಲ್ಲಾ ಪಾಸ್: ಇವುಗಳಲ್ಲಿ ಈಗಾಗಲೇ ಇಲಾಖೆ ಪ್ರಕಟಿಸಿದ ಫಲಿತಾಂಶದಲ್ಲಿ ಕೆಲವು ವಿಷಯಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಪಡೆದ ಕಾರಣಕ್ಕೆ ಫಲಿತಾಂಶವನ್ನು ತಿರಸ್ಕರಿಸಿ ಮರು ಪರೀಕ್ಷೆ ಬರೆದ ಎಂಟು ಮಂದಿ ಹೊಸ ವಿದ್ಯಾರ್ಥಿಗಳೆಲ್ಲರೂ ತೇರ್ಗಡೆಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಕಾಮರ್ಸ್ ವಿಭಾಗದವರಾದರೆ, ಒಬ್ಬ ಮಾತ್ರ ವಿಜ್ಞಾನ ವಿಭಾಗದವನು. ಆದರೆ ಇವರು ಕಳೆದ ಬಾರಿಗಿಂತ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದಿರುವರೇ ಎಂಬುದು ಗೊತ್ತಾಗಿಲ್ಲ.

ಉಳಿದಂತೆ ಪರೀಕ್ಷೆ ಬರೆದ 290 ಮಂದಿ ಖಾಸಗಿ ವಿದ್ಯಾರ್ಥಿಗಳಲ್ಲಿ 99 ಮಂದಿ ತೇರ್ಗಡೆಗೊಂಡು ಶೇ.34.14 ಫಲಿತಾಂಶ ಪಡೆದರೆ, ಪರೀಕ್ಷೆ ಬರೆದ ಏಕೈಕ ಪುನರಾವರ್ತಿತ ವಿದ್ಯಾರ್ಥಿ ಮತ್ತೆ ಅನುತ್ತೀರ್ಣಗೊಂಡಿದ್ದಾರೆ. ಪರೀಕ್ಷೆ ಬರೆದ 183 ವಿದ್ಯಾರ್ಥಿಗಳಲ್ಲಿ 60 (ಶೇ.32.79) ಹಾಗೂ 116 ವಿದ್ಯಾರ್ಥಿನಿಯರಲ್ಲಿ 47 ಮಂದಿ (ಶೇ.40.52) ತೇರ್ಗಡೆಗೊಂಡಿದ್ದಾರೆ.

ಇಂಗ್ಲೀಷ್ ಮಾಧ್ಯಮದ 136 ಮಂದಿಯಲ್ಲಿ 59 ಹಾಗೂ ಕನ್ನಡ ಮಾಧ್ಯಮ ದ 163 ಮಂದಿಯಲ್ಲಿ 48 ಮಂದಿ ಪಾಸಾಗಿದ್ದಾರೆ. 17ರಲ್ಲಿ ಐವರು ಪರಿಶಿಷ್ಟ ಜಾತಿ ಹಾಗೂ ಏಳು ಮಂದಿಯಲ್ಲಿ ಮೂವರು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಗಳು ಉತ್ತೀರ್ಣರಲ್ಲಿ ಸೇರಿದ್ದಾರೆ.

ಒಟ್ಟಾರೆಯಾಗಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 102 ಮಂದಿಯಲ್ಲಿ 38 ಮಂದಿ (ಶೇ.37.25), ಕಾಮರ್ಸ್ ವಿಭಾಗದಲ್ಲಿ 196 ಮಂದಿಯಲ್ಲಿ 68 ಮಂದಿ (ಶೇ.34.69), ವಿಜ್ಞಾನ ವಿಭಾಗದ ಏಕೈಕ ವಿದ್ಯಾರ್ಥಿ ತೇರ್ಗಡೆಗೊಂಡಿದ್ದಾನೆ. ನಗರ ಪ್ರದೇಶದ 178 ಮಂದಿಯಲ್ಲಿ 73ಮಂದಿ ಹಾಗೂ ಗ್ರಾಮೀಣ ಪ್ರದೇಶಗಳ 121 ಮಂದಿಯಲ್ಲಿ 34 ಮಂದಿ ತೇರ್ಗಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News