ಶೇ.50ರಷ್ಟು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ಸಿಗುತ್ತಿಲ್ಲ: ಡಾ.ವಾಸುದೇವ ಭಟ್

Update: 2021-09-20 14:44 GMT

ಉಡುಪಿ, ಸೆ.20: ದೇಶದಲ್ಲಿ ಪ್ರತಿ ವರ್ಷ ಸುಮಾರು 50-70 ಸಾವಿರ ಮಕ್ಕಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಅವರಲ್ಲಿ ಶೇ.50ರಷ್ಟು ಮಕ್ಕಳು ಚಿಕಿತ್ಸೆ ಪಡೆಯುತ್ತಿಲ್ಲ. ಕ್ಯಾನ್ಸರ್‌ಗೆ ತುತ್ತಾಗುವ ಮಕ್ಕಳಿಗೆ ಸೂಕ್ತ ಹಾಗೂ ಸುಧಿರ್ಘವಾಗಿ ಚಿಕಿತ್ಸೆ ನೀಡಿದಾಗ ಗುಣಮುಖರಾಗಲು ಸಾಧ್ಯವಿದೆ. ಈ ಬಗ್ಗೆ ಮಾಹಿತಿ ಕೊರತೆ ಯಿಂದ ಹೆಚ್ಚಿನ ಪೋಷಕರು ಚಿಕಿತ್ಸೆ ನೀಡುವಲ್ಲಿ ಹಿಂಜರಿಯುತ್ತಿದ್ದಾರೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ವಾಸುದೇವ್ ಭಟ್ ಹೇಳಿದ್ದಾರೆ.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಲಾದ ‘ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್ ಮತ್ತು ಚಿಕಿತ್ಸೆ’ ಕುರಿತ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದ ಕ್ಯಾನ್ಸರ್‌ಗೆ ತುತ್ತಾಗುವ ಮಕ್ಕಳ ಪೈಕಿ ಶೇ.80ರಷ್ಟು ಮಂದಿ ಚಿಕಿತ್ಸೆ ಪಡೆದು ಗುಣಮುಖ ರಾಗುತ್ತಿದ್ದಾರೆ. ಶೇ.10ರಷ್ಟು ಮಕ್ಕಳು ವಿವಿಧ ಸೋಂಕಿಗೆ ತುತ್ತಾಗಿ ಮೃತಪಡುತ್ತಿದ್ದಾರೆ. ಇನ್ನು ಉಳಿದ ಶೇ.10ರಷ್ಟು ಮಕ್ಕಳಲ್ಲಿ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಟ್ಟಾರೆಯಾಗಿ ಗಮನಿಸಿದರೆ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶವು ವಯಸ್ಕರಿಗಿಂತ ಉತ್ತಮ ಪ್ರಗತಿಯಲ್ಲಿದೆ ಎಂದರು.

ಮಕ್ಕಳ ಕ್ಯಾನ್ಸರ್‌ನ್ನು ರಕ್ತ ಮತ್ತು ಗಡ್ಡೆಯ ಕ್ಯಾನ್ಸರ್ ಎಂದು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ. ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಅತಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ರಕ್ತ ಅಥವಾ ಅಸ್ಥಿ ಮಜ್ಜೆಯ ಮಾದರಿಯ ಮೂಲಕ ರಕ್ತದ ಕ್ಯಾನ್ಸರ್ ಪತ್ತೆ ಮಾಡಬಹುದು. ರಕ್ತದ ಕ್ಯಾನ್ಸರ್ ಮತ್ತು ಲಿಂಫೊಮಾಗಳನ್ನು ಸಾಮಾನ್ಯವಾಗಿ ಕಿಮೊಥೆರಪಿಯೊಂದರಿಂದಲೇ ನಿರ್ವಹಿಸಲಾಗುತ್ತದೆ. ರಕ್ತದ ಕ್ಯಾನ್ಸರ್‌ನ ಕೆಲವೇ ಪ್ರಕರಣಗಳಲ್ಲಿ ರೇಡಿಯೊಥೆರಪಿ ಅಗತ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಮನೋ ವೈದ್ಯ ಡಾ.ವಿರೂಪಾಕ್ಷ ದೇವರುಮನೆ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 130 ಮಂದಿಗೆ ಚಿಕಿತ್ಸೆ

ಉಡುಪಿ ಜಿಲ್ಲೆಯಲ್ಲಿ ಹುಟ್ಟಿದ ಮುಗುವಿನಿಂದ ಹಿಡಿದು 18ವರ್ಷದೊಳಗಿನ 100 ರಿಂದ 130 ಮಕ್ಕಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಕೆಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮಕ್ಕಳ ಕ್ಯಾನ್ಸರ್ ಚಿಕಿತ್ಸೆಯಿಂದ ಯಾವುದೇ ರೀತಿಯಾದ ಗಂಭೀರವಾದ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ಡಾ.ವಾಸುದೇವ್ ಭಟ್ ತಿಳಿಸಿದರು.

ಪ್ರಸ್ತುತ ಸರಕಾರದ ಆಯ್ಯುಷ್‌ಮಾನ್ ಕಾರ್ಡ್‌ನಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ ದರ ಚಿಕಿತ್ಸೆ ನೀಡಲು ಅವಕಾಶ ಇದೆ. ಸರಕಾರಿ ಸೌಲಭ್ಯದಿಂದ ವಂಚಿತ ಕುಟುಂಬಗಳಿಗೆ ಕ್ರೌಡ್ ಫಂಡ್ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆ ಕೂಡ ಇದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News