ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಗೆ ನಾಲ್ವರು ಬಲಿ; 63 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಸೆ.20: ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ಗೆ ಒಟ್ಟು ನಾಲ್ವರು ಬಲಿಯಾಗಿದ್ದಾರೆ. ಮೃತಪಟ್ಟ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷರೆಲ್ಲರೂ ಹಿರಿಯ ನಾಗರಿಕರು. ದಿನದಲ್ಲಿ 63 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 355 ಮಂದಿ ಸೋಂಕಿನಿಂದ ಗುಣಮುಕ್ತರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 953ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗ ಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಉಡುಪಿ ತಾಲೂಕಿನ ಇಬ್ಬರು (77 ವರ್ಷ ಪ್ರಾಯದ ಮಹಿಳೆಯರು) ಹಾಗೂ ಕಾರ್ಕಳ ತಾಲೂಕಿನ ಇಬ್ಬರು (67 ವರ್ಷದ ಮಹಿಳೆ ಮತ್ತು 76 ವರ್ಷ ಪ್ರಾಯದ ಪುರುಷ) ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ 67 ವರ್ಷದ ಮಹಿಳೆ ಮಾತ್ರ ಇಂದು ಮೃತಪಟ್ಟಿದ್ದು, ಉಳಿದ ಮೂವರೂ ರವಿವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ468ಕ್ಕೇರಿದೆ. ಜೂನ್ 24ರ ಬಳಿಕ ಜಿಲ್ಲೆಯಲ್ಲಿ ದಿನದ ಗರಿಷ್ಠ ಸಾವು ಇದಾಗಿದೆ.
ದಿನದಲ್ಲಿ ಸೋಂಕು ದೃಢಪಟ್ಟ 63 ಮಂದಿಯಲ್ಲಿ 31 ಮಂದಿ ಪುರುಷರು ಹಾಗೂ 32 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 32 ಮಂದಿ ಉಡುಪಿ ತಾಲೂಕು, 13 ಮಂದಿ ಕುಂದಾಪುರ ಹಾಗೂ 17 ಮಂದಿ ಕಾರ್ಕಳ ತಾಲೂಕಿನವರು. ಇವರಲ್ಲಿ 15 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 48 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ಶನಿವಾರ 355 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 74,366ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 4976 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 75,787ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,96,088 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ.
5777 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಸೋಮವಾರ 5777 ಮಂದಿ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 2509 ಮಂದಿ ಮೊದಲ ಡೋಸ್ ಹಾಗೂ 3268 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 1617 ಮಂದಿ ಮೊದಲ ಡೋಸ್ ಹಾಗೂ 1601 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 892 ಮಂದಿ ಮೊದಲ ಡೋಸ್ ಹಾಗೂ 1625 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 8,74,314 ಮಂದಿಗೆ ಮೊದಲ ಡೋಸ್‌ನ್ನು ನೀಡಿದ್ದರೆ, 3,67,086 ಮಂದಿಗೆ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.