ಮಂಗಳೂರಿಗೆ ಬಂತು ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್ ಯು ವಿ

Update: 2021-09-20 17:26 GMT

ಮಂಗಳೂರು : ವಿಶ್ವದ ಅತ್ಯಂತ ದುಬಾರಿ, ವಿಲಾಸಿ ಕಾರುಗಳಲ್ಲಿ ಒಂದೆಂಬ ಖ್ಯಾತಿಯ ಬೆಂಟ್ಲಿ ಬ್ರ್ಯಾಂಡ್ ನ ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಎಸ್ ಯು ವಿ ಕಾರು ಮಂಗಳೂರಿಗೆ ಬಂದಿದೆ.

ನಗರದ ಖ್ಯಾತ ಬಿಲ್ಡರ್, ರೋಹನ್ ಕಾರ್ಪೊರೇಷನ್ ಮಾಲಕ ರೋಹನ್ ಮೊಂತೇರೊ ಅವರು ಈ ಎಸ್ ಯು ವಿ (ಸ್ಪೋರ್ಟ್ ಯುಟಿಲಿಟಿ ವೆಹಿಕಲ್)  ಕಾರು ಖರೀದಿಸಿದ್ದಾರೆ.  ಬೆಂಟ್ಲಿ ಬೆಂಟಾಯ್ಗ ವಿ8 ಫರ್ಸ್ಟ್ ಎಡಿಷನ್ ಈ ಮಾದರಿಯಲ್ಲಿ ಅತ್ಯಂತ ಹೊಸ, ಎಕ್ಸ್ ಕ್ಲ್ಯೂಸಿವ್  ಮಾಡೆಲ್ ಆಗಿದ್ದು ಕರ್ನಾಟಕದಲ್ಲಿ ಇದರ ಪ್ರಪ್ರಥಮ ಕಾರು ರೋಹನ್ ಖರೀದಿಸಿದ್ದಾರೆ. ಕಾರಿನ ಬೆಲೆ ಸುಮಾರು 6.5 ಕೋಟಿ ರೂಪಾಯಿ.

ಇಂಗ್ಲೆಂಡ್ ನ  ಬೆಂಟ್ಲಿ ಮೋಟರ್ಸ್ ನ ಕಾರುಗಳು ವಿಲಾಸಿ ಕಾರುಗಳಲ್ಲೇ ಅತ್ಯಂತ ದುಬಾರಿ ಹಾಗು ಅಷ್ಟೇ ಪ್ರತಿಷ್ಠಿತ ಎಂದು ಹೆಸರು ಮಾಡಿವೆ. ವಿಶ್ವಾದ್ಯಂತ ರಾಜ ಮನೆತನದವರು, ಬೃಹತ್ ಉದ್ಯಮಪತಿಗಳು, ಪ್ರಭಾವಿ ಹುದ್ದೆಗಳಲ್ಲಿರುವ ರಾಜಕಾರಣಿಗಳು ಮಾತ್ರ ಈ ಕಾರು ಬಳಸುತ್ತಾರೆ. ಈ ಹ್ಯಾಂಡ್ ಬಿಲ್ಟ್ ( ಮಾನವ ನಿರ್ಮಿತ) ಅಲ್ಟ್ರಾ ಲಕ್ಸುರಿ ಕಾರುಗಳ ಪ್ರತಿಯೊಂದು ಭಾಗ, ಬಣ್ಣ ಇತ್ಯಾದಿಗಳನ್ನು ಅದನ್ನು ಖರೀದಿಸುವವರ ಅಭಿರುಚಿ ಹಾಗು ಬಯಕೆಗೆ ತಕ್ಕಂತೆ ವಿನ್ಯಾಸ ಮಾಡಿ ಕೊಡುವುದು ಇದರ ವಿಶೇಷತೆ. ಒಳಗೆ ಅತ್ಯಂತ ಆರಾಮದಾಯಕ, ಹಿತಕರ ಪ್ರಯಾಣದ ಅನುಭವ ನೀಡುವ ಈ ಕಾರುಗಳು ಅಷ್ಟೇ ಆಕರ್ಷಕ, ವಿಶಿಷ್ಟ ಒಳಾಂಗಣ ಹಾಗು ಹೊರಾಂಗಣ ವಿನ್ಯಾಸ, ಭರ್ಜರಿ ಸಾಮರ್ಥ್ಯದ ಇಂಜಿನ್,  ಬೇರೆಲ್ಲೂ ಸಿಗದ ವಿಶೇಷ ಇತರ ಸೌಲಭ್ಯ ಹಾಗು ಫೀಚರ್ ಗಳಿಗಾಗಿ ಖ್ಯಾತಿ ಪಡೆದಿವೆ.

"ಕಾರು ಬಂದು ಮೂರ್ನಾಲ್ಕು ದಿನಗಳಾಗಿವೆ. ಬಹಳ ಚೆನ್ನಾಗಿದೆ. ಚಲಾಯಿಸಲು ಬಹಳ ಖುಷಿಯಾಗುತ್ತದೆ" ಎಂದು ರೋಹನ್ ಮೊಂತೇರೊ ವಾರ್ತಾಭಾರತಿಗೆ ತಿಳಿಸಿದ್ದಾರೆ.  ಬೆಂಟ್ಲಿ ಬೆಂಟಾಯ್ಗ ವಿ8 ಎಸ್ ಯು ವಿ ಸೊನ್ನೆಯಿಂದ 100 ಕಿಮೀ ವೇಗ ತಲುಪಲು ಕೇವಲ  4.5 ಸೆಕೆಂಡುಗಳು ಸಾಕು. ಹಾಗೆಯೇ ಗಂಟೆಗೆ ಗರಿಷ್ಟ 290 ಕಿಮೀ ವೇಗದಲ್ಲಿ ಹೋಗಬಲ್ಲದು.

ರೋಹನ್ ಮೊಂತೇರೊ ಮಾಲಕತ್ವದ ರೋಹನ್ ಕಾರ್ಪೊರೇಷನ್ (ಈ ಹಿಂದೆ ಪ್ರಾಪರ್ಟಿ ಇನ್ಫ್ರಾಟೆಕ್ ) ಹಲವಾರು ವಸತಿ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News