ಭೌತಿಕ ತರಗತಿ ಆರಂಭಿಸಲು ವಿದ್ಯಾರ್ಥಿಯಿಂದ ಮನವಿ: "ಇದರ ಬದಲು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಿ" ಎಂದ ಸುಪ್ರೀಂ ಕೋರ್ಟ್

Update: 2021-09-20 17:05 GMT

ಹೊಸದಿಲ್ಲಿ, ಸೆ. 20: ಕೊರೋನ ಸಾಂಕ್ರಾಮಿಕ ರೋಗ ಗಣನೀಯವಾಗಿ ಕಡಿಮೆಯಾಗಿದೆ. ಆದುದರಿಂದ ಶಾಲೆಯಲ್ಲಿ ಭೌತಿಕ ತರಗತಿಗಳನ್ನು ಆರಂಭಿಸುವಂತೆ ಕೋರಿ 12ನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ ಮನವಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮನವಿ ಸಲ್ಲಿಸುವುದರ ಬದಲು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸುವಂತೆ ವಿದ್ಯಾರ್ಥಿಗೆ ಸಲಹೆ ನೀಡಿದೆ. 

‘‘ಮನವಿ ಸಲ್ಲಿಸುವ ಬದಲು ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸಲು ವಿದ್ಯಾರ್ಥಿಗೆ ತಿಳಿಸಿ. ನಾವು ಇದನ್ನು ಸಾರ್ವಜನಿಕ ಪ್ರಚಾರ ತಂತ್ರ ಎಂದು ಹೇಳುತ್ತಿಲ್ಲ. ಆದರೆ, ಅವನು ಹೇಳಿದ ಪರಿಹಾರ ತಪ್ಪು ಗ್ರಹಿಕೆಯಿಂದ ಕೂಡಿದ್ದಾಗಿದೆ ’’ ಎಂದು ಡಿ.ವೈ. ಚಂದ್ರಚೂಡ ಹಾಗೂ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಇಬ್ಬರು ಸದಸ್ಯರ ನ್ಯಾಯಪೀಠ ಹೇಳಿದೆ. 

ಅಲ್ಲದೆ ಪೀಠ ಮನವಿಯನ್ನು ತಿರಸ್ಕರಿಸಿತು. ವಿವಿಧ ರಾಜ್ಯಗಳಲ್ಲಿ ವಿವಿಧ ನಿಯಮಗಳು ಇವೆ ಎಂದು ನ್ಯಾಯಾಲಯ ತಿಳಿಸಿತು. ಅಲ್ಲದೆ, ಎಲ್ಲ ರಾಜ್ಯಗಳಿಗೆ ಏಕರೂಪಿ ನಿಯಮ ಸೂಕ್ತವಾಗುವುದಿಲ್ಲ. ವಿದ್ಯಾರ್ಥಿಗಳು ಇಂತಹ ಅರ್ಜಿಗಳನ್ನು ಸಲ್ಲಿಸುವುದರಿಂದ ದೂರ ಇರಬೇಕು ಎಂದು ಪೀಠ ಹೇಳಿತು. ‘‘ಎಲ್ಲ ಮಕ್ಕಳು ಶಾಲೆಗೆ ಹೋಗಬೇಕು. ಆದರೆ, ನಾವು ನ್ಯಾಯಾಂಗ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಈ ಬಗ್ಗೆ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಟ್ಟಿದ್ದೇವೆ. ವಿವಿಧ ರಾಜ್ಯಗಳಲ್ಲಿ ವಿವಿಧ ಸಂಖ್ಯೆಯ ಜಿಲ್ಲೆಗಳಿವೆ. ಅಲ್ಲದೆ ಜನಸಂಖ್ಯೆಯಲ್ಲಿ ಕೂಡ ವ್ಯತ್ಯಾಸ ಇದೆ. ನಾವು ಆಡಳಿತವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News