ಸಿಇಟಿ ಫಲಿತಾಂಶ : 10 ರ್ಯಾಂಕ್‌ಗಳ ಪೈಕಿ ದ.ಕ. ಜಿಲ್ಲೆಗೆ 9 ರ್ಯಾಂಕ್‌ಗಳ ಗರಿ

Update: 2021-09-20 17:15 GMT

ಮಂಗಳೂರು, ಸೆ.20: ಇತ್ತೀಚೆಗೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಮೊದಲ 10 ರ್ಯಾಂಕುಗಳಲ್ಲಿ 9 ರ್ಯಾಂಕುಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರ್ಯಾಂಕ್ ಪಡೆದವರ ಪೈಕಿ ಆರು ವಿದ್ಯಾರ್ಥಿಗಳು ನಗರದ ಎಕ್ಸ್‌ಪರ್ಟ್ ಪ.ಪೂ. ಕಾಲೇಜನವರು ಎನ್ನುವುದು ವಿಶೇಷ. ಎರಡು ರ್ಯಾಂಕುಗಳನ್ನು ಎಕ್ಸಲೆಂಟ್ ಮೂಡುಬಿದರೆ ಕಾಲೇಜು ಪಡೆದಿದ್ದರೆ, ಒಂದು ರ್ಯಾಂಕು ಆಳ್ವಾಸ್ ಮೂಡುಬಿದರೆ ಕಾಲೇಜು ಗಳಿಸಿದೆ.

ವಿದ್ಯಾರ್ಥಿ ರೀತಮ್ ಬಿ. ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ ದ್ವಿತೀಯ, ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಹಾಗೂ ಬ್ಯಾಚುಲರ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ ಹಾಗೂ ಬಿ.ಫಾರ್ಮಾ/ಡಿ.ಫಾರ್ಮಾದಲ್ಲಿ ತೃತೀಯ (ಒಟ್ಟು ನಾಲ್ಕು) ರ್ಯಾಂಕುಗಳನ್ನು ಪಡೆದಿದ್ದಾರೆ. ರೀತಮ್ ಅವರ ತಂದೆ ಡಾ.ಬಯ್ಯಪ್ಪ ರೆಡ್ಡಿ ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್ ಆಗಿದ್ದಾರೆ. ತಾಯಿ ಭಾರತಿ ಎಲ್. ಗೃಹಿಣಿ.

ತೇಜಸ್ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಇವರ ತಂದೆ ಡಾ.ರಾಮರಾವ್ ಜಗದೀಶ್ ಎಚ್‌ಎಎಲ್ ನಲ್ಲಿ ಡೆಂಟಿಸ್ಟ್ ಆಗಿದ್ದಾರೆ. ತಾಯಿ ಪ್ರಪುಲ್ಲಾ ಗೃಹಿಣಿ.ನಾಲ್ಕನೇ ರ್ಯಾಂಕ್‌ನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದೆ. ನೀಟ್ ಪರೀಕ್ಷೆ ಬರೆದಿದ್ದು, ವೈದ್ಯಕೀಯ ಓದುವ ಇಚ್ಚೆ ಹೊಂದಿರುವುದಾಗಿ ತೇಜಸ್ ಪ್ರತಿಕ್ರಿಯಿಸಿದ್ದಾರೆ. ಉತ್ತಮ ಫಲಿತಾಂಶ ಪಡೆಯುವಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ ವರ್ಗ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಸ್ಮರಿಸಿದರು.

100 ರ್ಯಾಂಕುಗಳ ಒಳಗೆ ನನ್ನ ಹೆಸರು ಇರಬಹುದು ಎಂದು ನಿರೀಕ್ಷೆ ಇತ್ತು. ಉತ್ತಮ ಫಲಿತಾಂಶ ಬಂದಿದೆ. ಸಹಜವಾಗಿಯೇ ಸಂತೋಷ ಆಗಿದೆ ಎಂದು ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 7ನೇ ರ್ಯಾಂಕು ಪಡೆದ ಸಂಜನಾ ಕಾಮತ್ ಸಂಭ್ರಮ ಹಂಚಿಕೊಂಡಿದ್ದಾರೆ. ಮಗಳು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದು ಅವರ ಅಮ್ಮ ಡಾ.ಭಾವನಾ ಪ್ರತಿಕ್ರಿಯಿಸಿದರು. ಸಂಜನಾ ಅವರ ತಂದೆ ಮಹೇಶ್ ಕಾಮತ್ ಇನ್ಫೋಸಿಸ್ ಉದ್ಯೋಗಿ.

ಸಾತ್ವಿಕ್ ಜಿ.ಭಟ್ ಬ್ಯಾಚುಲರ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ ನಲ್ಲಿ 8ನೇ ರ್ಯಾಂಕು ಹಾಗೂ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 7ನೇ ರ್ಯಾಂಕು ಪಡೆದಿದ್ದಾರೆ. ಆಳ್ವಾಸ್ ಮೂಡುಬಿದರೆಯ ಸುಜ್ಞಾನ್ ಆರ್.ಶೆಟ್ಟಿ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ 5ನೇ ರ್ಯಾಂಕು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News