×
Ad

ಅಮೆರಿಕ-ಮೆಕ್ಸಿಕೊ ಗಡಿಭಾಗದಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ಹೈಟಿ ನಿರಾಶ್ರಿತರು: ಸುದ್ಧಿಸಂಸ್ಥೆ ವರದಿ

Update: 2021-09-20 23:08 IST

 ಮೆಕ್ಸಿಕೊ ಸಿಟಿ, ಸೆ.20: ಹೈಟಿಯಿಂದ ಓಡಿಬಂದಿರುವ ನೂರಾರು ನಿರಾಶ್ರಿತರು ಅಮೆರಿಕದ ಟೆಕ್ಸಾಸ್ನ ಡೆಲ್ರಿಯೊ ನಗರದಲ್ಲಿ ನದಿಯ ಸೇತುವೆಯಡಿ ಅತಂತ್ರಸ್ಥಿತಿಯಲ್ಲಿದ್ದು ಆಹಾರ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದ ಕಂಗಾಲಾಗಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಇವರಲ್ಲಿ ಕೆಲವರು ಕಳೆದ ಕೆಲ ದಿನಗಳಿಂದ ಮೆಕ್ಸಿಕೋದ ಕ್ಲಾವಿಲಾ ರಾಜ್ಯದ ಸ್ಯೂಡಾ ಅಕ್ಯುನ ನಗರದಿಂದ ಆಹಾರ ಮತ್ತು ಇತರ ಅಗತ್ಯದ ಸಾಮಾಗ್ರಿಗಳನ್ನು ತರುತ್ತಿದ್ದರು. ಇವರು ನದಿಯ ದಡದಿಂದ ಸೇತುವೆಯ ಮೂಲಕ ಮೆಕ್ಸಿಕೋಗೆ ಪ್ರಯಾಣಿಸಲು ಅಮೆರಿಕದ ಅಧಿಕಾರಿಗಳು ಅವಕಾಶ ನೀಡುತ್ತಿದ್ದರು. ಆದರೆ ರವಿವಾರ ಏಕಾಏಕಿ ಇದಕ್ಕೆ ಅಡ್ಡಿಪಡಿಸಿದ ಅಮೆರಿಕದ ಅಧಿಕಾರಿಗಳು ‘ಒಂದು ವೇಳೆ ಮೆಕ್ಸಿಕೋಗೆ ತೆರಳಿದರೆ ಮತ್ತೆ ಈ ಭಾಗಕ್ಕೆ ಮರಳುವಂತಿಲ್ಲ’ ಎಂದು ಸೂಚಿಸಿರುವುದಾಗಿ ನಿರಾಶ್ರಿತರು ಹೇಳಿದ್ದಾರೆ.

 ಇದೀಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ನಮ್ಮ ಸ್ಥಿತಿ ಎಂದು 37 ವರ್ಷದ ಜಾನ್ಸಿಟೊ ಜೀನ್ ಹೇಳಿದ್ದಾನೆ. ನೆಲದ ಮೇಲೆ ಪೇಪರ್ ಹಾಳೆ ಹರಡಿ ಅದರ ಮೇಲೆ 3 ದಿನದಿಂದ ಮಲಗುತ್ತಿದ್ದೇನೆ. ಪತ್ನಿ ಹಾಗೂ 3 ಮತ್ತು 4 ವರ್ಷದ ಇಬ್ಬರು ಮಕ್ಕಳೂ ಜತೆಗಿದ್ದಾರೆ. ಹೈಟಿಯ ಸಂಘರ್ಷದಿಂದ ದಿಕ್ಕೆಟ್ಟು ಇಲ್ಲಿಗೆ ಬಂದಿರುವುದಕ್ಕೆ ಇದೀಗ ವಿಷಾದ ಎನಿಸುತ್ತಿದೆ. ಇಲ್ಲಿ ಮಾನವೀಯ ಸ್ಥಿತಿಯಿಲ್ಲ. ಕುಡಿಯುವ ನೀರಿಗೂ ಪರದಾಡಬೇಕಿದೆ  ಎಂದಾತ ಅಳಲು ತೋಡಿಕೊಂಡಿದ್ದಾನೆ.

 ಬಹುತೇಕ ಹೈಟಿ ಪ್ರಜೆಗಳೇ ಇರುವ 12,000ಕ್ಕೂ ಅಧಿಕ ವಲಸಿಗರು ಕಳೆದ ಕೆಲ ದಿನಗಳಿಂದ ಮೆಕ್ಸಿಕೊ-ಅಮೆರಿಕ ಗಡಿಯ ಎರಡೂ ಬದಿಗಳಲ್ಲಿ ಹತಾಶೆಯಿಂದ ನಿಂತಿದ್ದು ವಲಸೆ ಪ್ರಕ್ರಿಯೆ ಪೂರ್ಣಗೊಳ್ಳಲು ಕಾಯುತ್ತಿದ್ದಾರೆ. ಆದರೆ, ಇದೀಗ ಅಮೆರಿಕದ ಅಧಿಕಾರಿಗಳು ತಮ್ಮ ಪ್ರದೇಶದಲ್ಲಿ ತಾತ್ಕಾಲಿಕ ಶಿಬಿರದಲ್ಲಿ ನೆಲೆಸಿರುವ ವಲಸಿಗರನ್ನು ನಿರ್ದಾಕ್ಷಿಣ್ಯವಾಗಿ ಹಿಂದಕ್ಕೆ ಅಟ್ಟುತ್ತಿದ್ದಾರೆ ಎಂದು ವಲಸಿಗರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ. ಇದನ್ನು ನಿರಾಕರಿಸಿರುವ ಅಮೆರಿಕದ ಗಡಿಗಸ್ತು ವಿಭಾಗದ ಮುಖ್ಯಸ್ಥ ರೌಲ್ ಆರ್ಟಿಜ್ , ನಿರಾಶ್ರಿತರಿಗೆ ಆಹಾರ, ನೀರು, ಸ್ಥಳಾಂತರಿಸಬಹುದಾದ ಶೌಚಾಲಯ, ಟವೆಲ್ಗಳು, ತುರ್ತು ವೈದ್ಯಕೀಯ ಸೌಲಭ್ಯ, ಪ್ರಥಮ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಜುಲೈಯಲ್ಲಿ ಹೈಟಿಯ ಅಧ್ಯಕ್ಷರ ಹತ್ಯೆಯಾದ ಬಳಿಕ ಅಲ್ಲಿ ಅಶಾಂತಿಯ ಪರಿಸ್ಥಿತಿಯಿದೆ. ಆಗಸ್ಟ್ನಲ್ಲಿ ಭಾರೀ ಭೂಕಂಪ ಮತ್ತು ಭೀಕರ ಚಂಡಮಾರುತದಿಂದ ಕಂಗೆಟ್ಟ ಸಾವಿರಾರು ಪ್ರಜೆಗಳು ಅಮೆರಿಕದತ್ತ ಪಲಾಯನ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News