ಮಂಗಳೂರು: ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ಕ್ರಿಮಿನಲ್ ಕೇಸು

Update: 2021-09-22 10:21 GMT

ಮಂಗಳೂರು, ಸೆ.22: ನಗರ ಪಾಲಿಕೆ ವ್ಯಾಪ್ತಿಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಕಸ ಎಸೆದರೆ ಕ್ರಿಮಿನಲ್ ಪ್ರಕರಣ ದಾಖಲಾಗುವುದು ಗ್ಯಾರಂಟಿ. ಇಂತಹ ಪ್ರಕರಣವೊಂದಕ್ಕೆ ಸಂಬಂಧಿಸಿ ನಗರದ ದಕ್ಷಿಣ ಪೊಲೀಸ್ ಠಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಪ್ರಕ್ರಿಯೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದಿದೆ.

ಸಾರ್ವಜನಿಕ ಸ್ಥಳ ಹಾಗೂ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವುದರಿಂದ ನಗರದ ಹಲವು ಪ್ರದೇಶಗಳು ಬ್ಲಾಕ್ ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ. ಇದು ನಗರದ ಸ್ವಚ್ಛತೆಗೆ ತೊಂದರೆಯಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಮಹಾನಗರ ಪಾಲಿಕೆ ಸಾರ್ವಜನಿಕರಿಗೆ ಸೂಚನೆಯನ್ನೂ ನೀಡಿದೆ. ಮಾತ್ರವಲ್ಲದೆ ಇಂತಹ ಕೃತ್ಯಗಳನ್ನು ಪತ್ತೆಹಚ್ಚಲು, ತಪ್ಪಿತಸ್ಥರ ವಿರುದ್ಧ ದಂಡ ವಿಧಿಸುವ ಉದ್ದೇಶದಿಂದ ಈಗಾಗಲೇ ನಗರದ ವಿವಿಧ ಕಡೆಗಲಲ್ಲಿ ಸೋಲಾರ್ ಚಾಲಿತ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗುತ್ತಿದೆ.

ಇದೀಗ ಸೆ. 20ರಂದು ನಗರದ ನಂದಿಗುಡ್ಡ ಸ್ಮಶಾನದ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಎಸೆದವರನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆ ಬದಿ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಮೂರು ವಾಹನಗಳ ಸವಾರರ ಮೇಲೆ ಕ್ರಮ ಜರಗಿಸುವಂತೆ ಕೋರಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ಮಂಗಳೂರು ಮಹಾನಗರ ಪಾಲಿಕೆಯ ಪ್ರಕಟಣೆಯನ್ನು ಪಾಲಿಕೆಯ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News