ಮಂಗಳೂರು ವಿವಿ: 42 ನೇ ಸಂಸ್ಥಾಪನಾ ದಿನ ಹಾಗೂ ಶಿಕ್ಷಕರ ದಿನಾಚರಣೆ

Update: 2021-09-22 13:05 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ 42 ನೇ ಸಂಸ್ಥಾಪನಾ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಮಂಗಳೂರು ವಿವಿಯ  ಮಂಗಳ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಎನ್ಹೆಚ್ಆರ್ಡಿಎನ್  ನ್ಯಾಷನಲ್ ಬೋರ್ಡ್ ಮೆಂಬರ್ ಹಾಗೂ ಟಿಸಿಎಸ್ ಲಿಮಿಟೆಡ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಫ್. ಇಸ್ರೇಲ್ ಇನ್ಬರಾಜ್ ಅವರು ಸಾಮಾನ್ಯ ವ್ಯಕ್ತಿಯನ್ನು ಬೌದ್ಧಿಕ ಆಸ್ತಿಯನ್ನಾಗಿಸುವುದೇ ಶಿಕ್ಷಕ ವೃತ್ತಿಯ ವಿಶೇಷ. “ನಾವು ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿಯಲ್ಲ, ಬದಲಾಗಿ ಉದ್ಯೋಗದಾತರನ್ನಾಗಿಸಬೇಕು. ಜ್ಞಾನ ಪಡೆದುಕೊಂಡರಷ್ಟೇ ಸಾಲದು ಅದರ ಬಳಕೆಯ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು  ಹೇಳಿದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಎಲ್ಲಾ ವೃತ್ತಿಗೂ ಮೂಲ ಆಗಿರುವುದರೊಂದಿಗೆ ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಶಕ್ತಿ ಇರುವುದು ಈ ವೃತ್ತಿಗೆ ಮಾತ್ರ. ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳ ಜೊತೆಗೆ ವಿದ್ಯಾರ್ಥಿಗಳ ಪಾತ್ರವೂ ಮಹತ್ತರವಾದುದು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ ಜಿ ತಳವಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಳೆದ 42 ವರ್ಷಗಳಿಂದ ಮಂಗಳೂರು ವಿವಿಯು ಹಂತ ಹಂತವಾಗಿ ಬೆಳೆದು ಜಾಗತಿಕ ಮಟ್ಟದಲ್ಲಿ ಗುರುತಿಸಿದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ಖಾಲಿಯಿರುವ ಎಸ್/ಎಸ್ಟಿ ಬ್ಯಾಕಾಲಾಗ್ ಹುದ್ದೆಗಳನ್ನು (ಹೈ-ಕ) ಮತ್ತು ಬೋಧಕ- ಬೋಧಕೇತರ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿಮಾಡಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೆ, ಬಾಕಿಯಿರುವ ಬೋಧಕ, ಬೋಧಕೇತರರ ಬಡ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಜೀವವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಆರ್.ಶ್ರೀಧರ್, ಮಂಗಳೂರು ವಿವಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಶಾಲಾಕ್ಷಿ, ಮಂಗಳೂರು ವಿವಿ ಗಣಕ ವಿಜ್ಞಾನ ವಿಭಾಗದ ಪ್ರೊ.ಬಿ.ಎಚ್ .ಶೇಖರ್  ಅವರನ್ನು ಸನ್ಮಾನಿಸಿ  ಗೌರವಿಸಲಾಯಿತು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗಕ್ಕೆ ನೀಡಿದ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯ ಪುರಸ್ಕೃತರ ಬಗ್ಗೆ  ಡಾ.ಜೆರಾಲ್ಡ್ ಸಂತೋಷ್ ಡಿಸೋಜ ಅವರು ವಿವರಿಸಿದರು.

ಹಾಗೂ ರಾಷ್ಟ್ರೀಯ ಯುವಜನೋತ್ಸವ ಬಹುಮಾನ ವಿಜೇತರ ಬಗ್ಗೆ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊ.ಮಂಜುಳಾ ಶಾಂತರಾಮ್ ಅವರು ವಿವರಿಸಿದರು. ಯುವಜನೋತ್ಸವದಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ನಾರಾಯಣ್ , ಮಂಗಳೂರು ವಿವಿಯ ವಿಜ್ಞಾನ ನಿಕಾಯದ ಡೀನ್ ಪ್ರೊ.ಮಂಜುನಾಥ ಪಟ್ಟಾಬಿ, ವಾಣಿಜ್ಯ ನಿಕಾಯದ ಡೀನ್ ಪ್ರೊ.ಮುನಿರಾಜು ವೈ, ಕಲಾ ನಿಕಾಯದ ಡೀನ್ ಪ್ರೊ.ಉದಯ ಬಿ, ಶಿಕ್ಷಣ ನಿಕಾಯದ ಡೀನ್ ಜೆರಾಲ್ಡ್ ಸಂತೋಷ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ.ಅವರು ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ವಂದಿಸಿದರು. ಪ್ರೊ.ರವಿಶಂಕರ್ ರಾವ್  ಹಾಗೂ ಡಾ.ಧನಂಜಯ ಕುಂಬ್ಳೆ  ಅವರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಮಂಗಳೂರು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News