ಎಂಐಟಿ 35 ವಿದ್ಯಾರ್ಥಿಗಳಿಗೆ ತಲಾ ವಾರ್ಷಿಕ 44 ಲಕ್ಷ ರೂ.ಪ್ಯಾಕೇಜ್‌ನ ಉದ್ಯೋಗ ನೀಡಿದ ಮೈಕ್ರೋಸಾಫ್ಟ್

Update: 2021-09-22 14:12 GMT

ಉಡುಪಿ, ಸೆ.22: ಕಳೆದ ಒಂದೂವರೆ ವರ್ಷಗಳ ಕೊರೋನ ಸಾಂಕ್ರಾಮಿಕದ ವ್ಯಾಪಕತೆ ನಡುವೆ ನಿರುದ್ಯೋಗ ಸಮಸ್ಯೆ ತೀವ್ರಗೊಂಡಿರುವ ಹಾಗೂ ಉದ್ಯೋಗದ ಅವಕಾಶ ಕ್ಷೀಣಿಸುತ್ತಿರುವ ಆರೋಪಗಳ ನಡುವೆಯೇ ಬೆಳ್ಳಿ ಕಿರಣದಂತೆ ಅಂತಾರಾಷ್ಟ್ರೀಯ ಮಟ್ಟದ ದೈತ್ಯ ಐಟಿ ಕಂಪೆನಿಯಾಗಿರುವ ಮೈಕ್ರೋಸಾಫ್ಟ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) 35 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಲಾ 44 ಲಕ್ಷ ರೂ.ವಾರ್ಷಿಕ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗ ಒದಗಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾದ ಅತ್ಯಧಿಕ ಮೊತ್ತದ ಸಂಬಂಳದ ಪ್ಯಾಕೇಜ್ ಇದಾಗಿದೆ ಎಂದು ಎಂಐಟಿ ವಿದ್ಯಾಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷ ಮೈಕ್ರೋಸಾಫ್ಟ್‌ನೊಂದಿಗೆ ವಿಶ್ವದ ಪ್ರಸಿದ್ಧ ಐಟಿ ಹಾಗೂ ಇತರ ಕಂಪೆನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಬಂದಿದ್ದು, ಸುಮಾರು 300ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಕ್ರೋಸಾಫ್ಟ್‌ನೊಂದಿಗೆ ಅಡೋಬ್, ಅಮೆಝಾನ್, ಬಜಾಜ್ ಫಿನ್‌ಸರ್ವ್, ಬ್ಲಾಕ್‌ರಾಕ್, ಚಾರ್ಜ್‌ಬೀ, ಕಿಸ್ಕೋ ಸಿಸ್ಟಮ್, ಸಿಟ್ರಿಕ್ಸ್ ಆರ್‌ಎಂಡ್‌ಡಿ, ಕ್ಲೌಡೆರಾ, ಕಾಮ್‌ವಾಲ್ಟ್, ಫಿಡಿಲಿಟಿ ಇನ್‌ವೆಸ್ಟ್‌ಮೆಂಟ್, ಫ್ಲಿಪ್‌ಕಾರ್ಟ್, ಗೋಲ್ಡ್‌ಮ್ಯಾನ್ ಸಾಚ್ಸ್, ಸ್ಯಾಪ್ ಲ್ಯಾಬ್, ತೇಜಸ್ ನೆಟ್‌ವರ್ಕ್, ಯುಬಿಎಸ್ ಬ್ಯುಸಿನೆಸ್, ಜೆಪಿ ಮೋರ್ಗನ್, ಕಾಂಪ್ರೈಸ್, ಓರಾಕಲ್, ವಿಎಂ ವೇರ್, ವೆಲ್ಸ್ ಫೋರ್ಗೊ, ವೆಸ್ಟರ್ನ್ ಡಿಜಿಟಲ್ ಮುಂತಾದ ಕಂಪೆನಿಗಳು ವರ್ಚುವಲ್ ಮಾದರಿಯಲ್ಲಿ 2020-21ನೇ ಶೈಕ್ಷಣಿಕ ಸಾಲಿನ ಮೊದಲ ಹಂತದ ಕ್ಯಾಂಪಸ್ ಸಂದರ್ಶನ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿವೆ.

ಎಂಐಟಿ ಕ್ಯಾಂಪಸ್ ಸಂದರ್ಶನದಲ್ಲಿ ಇದುವರೆಗೆ 292 ವಿದ್ಯಾರ್ಥಿಗಳು ವರ್ಷಕ್ಕೆ ಸರಾಸರಿ 18.2 ಲಕ್ಷ ರೂ.ಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗ ಹಾಗೂ ಇಂಟರ್‌ಶಿಪ್‌ಗೆ ಪ್ರಸ್ತಾಪವನ್ನು ಪಡೆದಿದ್ದಾರೆ ಎಂದು ಎಂಐಟಿಯ ನಿರ್ದೇಶಕ ಕ್ವಾ. ಡಾ.ಅನಿಲ್ ರಾಣಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಐಟಿಯಲ್ಲಿ ಕ್ಯಾಂಪಸ್ ಸಂದರ್ಶನ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News