ಗುಜರಾತಿನ ಅದಾನಿ ಬಂದರ್ ನಲ್ಲಿ ಭಾರೀ ಪ್ರಮಾಣದ ಹೆರಾಯಿನ್ ಸಾಗಾಟ ಪ್ರಕರಣ: ಚೆನ್ನೈನಲ್ಲಿ ದಂಪತಿ ಬಂಧನ

Update: 2021-09-22 18:09 GMT
ಸಾಂದರ್ಭಿಕ ಚಿತ್ರ (Photo source: PTI)

ಹೊಸದಿಲ್ಲಿ/ಹೈದರಾಬಾದ್: ಗುಜರಾತ್‌ನಲ್ಲಿ ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಮುಂಡ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ದಂಪತಿಯನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಕಂಟೇನರ್‌ನೊಳಗೆ ಏನಿತ್ತು ಎಂದು ತಮಗೆ ಬಗ್ಗೆ ತಿಳಿದಿರಲಿಲ್ಲ. ಕಂಟೇನರ್‌ಗಳನ್ನು ಪರೀಕ್ಷಿಸುವುದು ತನ್ನ ಜವಾಬ್ದಾರಿಯಲ್ಲ ಎಂದು ಅದಾನಿ ಸಮೂಹ ಹೇಳಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಬಂಧಿತ ದಂಪತಿ ಸುಧಾಕರ್ ಮಾಚವರಪು ಹಾಗೂ  ವೈಶಾಲಿ ಗೋವಿಂದರಾಜು ಚೆನ್ನೈನಲ್ಲಿ ಆಮದು ಕಂಪೆನಿಯನ್ನು ನಡೆಸುತ್ತಿದ್ದರು. ತಾವು ಆಮದು ಮಾಡಿದ ಪ್ರತಿ ಕಂಟೇನರ್‌ಗೆ  30,000 ರೂ. ಪಾವತಿಸುತ್ತಿದ್ದರು ಎನ್ನಲಾಗಿದೆ. ಕಸ್ಟಮ್ ಕ್ಲಿಯರೆನ್ಸ್ ಮತ್ತು ಸಾಗಾಣಿಕೆಗೆ ಸಹಾಯ ಮಾಡಲು ಅವರು 3 ಲಕ್ಷ ರೂ.ವನ್ನು ಹವಾಲಾದಲ್ಲಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಾಜು 20,000 ಕೋಟಿ ಮೌಲ್ಯದ ಸುಮಾರು 3,000 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿದ್ದು, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದೆ.

ಆಶಿ ಟ್ರೇಡಿಂಗ್ ಕಂಪನಿಯ ನೋಂದಾಯಿತ ವಿಳಾಸವನ್ನು ಸರಕು ಬಿಲ್ ನಲ್ಲಿ ಹೆಸರಿಸಿದ್ದು, ಇದು ವೈಶಾಲಿ ಗೋವಿಂದರಾಜು ಅವರ ತಾಯಿ ತಾರಕ ಗೋವಿಂದರಾಜು ಅವರಿಗೆ ಸೇರಿದ್ದಾಗಿದೆ.

ಮುಂಡ್ರಾ ಬಂದರಿನಲ್ಲಿ ಮಾದಕವಸ್ತುವನ್ನು ವಶಪಡಿಸಿಕೊಂಡ ಬಳಿಕ  ಸಾಮಾಜಿಕ ಮಾಧ್ಯಮದಲ್ಲಿ ಅದಾನಿ ಸಮೂಹ ಹಾಗೂ ವಿಶೇಷವಾಗಿ ಗುಜರಾತ್ ಹಾಗೂ  ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ  ರಾಜಕೀಯ ಪ್ರತಿಸ್ಪರ್ಧಿಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

ಹೆರಾಯಿನ್ ವಶಕ್ಕೆ ಸಂಬಂಧಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್ ಪಕ್ಷವು, ಪ್ರಧಾನ ಮಂತ್ರಿಯವರ ರಾಜ್ಯದಿಂದ ಇಷ್ಟೊಂದು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿರುವ ಕುರಿತು ಪ್ರಶ್ನೆಗಳನ್ನು ಎತ್ತಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಲ್ಲಿ ಪ್ರಮುಖ ಹುದ್ದೆಗಳು ಏಕೆ ಖಾಲಿ ಇವೆ ಎಂದು ಕೇಳಿದೆ.

ಗುಜರಾತ್‌ನ ಮುಂಡ್ರಾ ಬಂದರಿನಲ್ಲಿ 21,000 ಕೋಟಿ ಮೌಲ್ಯದ 3,000 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಇದು ಇಲ್ಲಿಯವರೆಗೆ ವಶಪಡಿಸಿಕೊಂಡ ಭಾರೀ ಪ್ರಮಾಣದ ಮಾದಕ ವಸ್ತುವಾಗಿದೆ. ಆದರೂ ಪ್ರಧಾನಿ ಮೋದಿ ಹಾಗೂ  ಬಿಜೆಪಿ ನಾಯಕರು ಮೌನವಾಗಿದ್ದಾರೆ. ಮುಂಡ್ರಾ ಬಂದರ್ ಅನ್ನು ಅದಾನಿ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ದಿವ್ಯ ಮೌನಕ್ಕೆ ಇದುವೇ ಕಾರಣವೇ! ಖಾಸಗಿಯಾಗಿ ಕಾರ್ಯನಿರ್ವಹಿಸುವ ಬಂದರುಗಳಲ್ಲಿ ಹೆಚ್ಚಿನ ಪರಿಶೀಲನೆಯ ಅಗತ್ಯವಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಡಾ.ಶಮಾ ಮೊಹಮದ್ ಬುಧವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News