ಮಂಗಳೂರು: ಮಹಿಳೆಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Update: 2021-09-22 14:21 GMT

ಮಂಗಳೂರು, ಸೆ.22: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಬೆಳ್ತಂಗಡಿ ಕಳಿಂಜೆ ನಿವಾಸಿ ಕ್ರೇನ್ ಆಪರೇಟರ್ ಉಮೇಶ್ ಪೂಜಾರಿ (31) ಶಿಕ್ಷೆಗೊಳಗಾದವ ಆರೋಪಿ.

ಆರೋಪಿಗೆ ಅದಾಗಲೇ ಮದುವೆಯಾಗಿತ್ತು. ಆದಾಗ್ಯೂ, ವಿವಾಹದ ವಿಚಾರವನ್ನು ಮೆರೆಮಾಚಿ ಮುಲ್ಕಿ ತೋಕೂರಿನ ಪರಿಶಿಷ್ಟ ಜಾತಿಯ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿ ಆಕೆಯನ್ನು ಪ್ರೀತಿಸುವ ನಾಟಕವಾಡಿದ್ದ. ಮದುವೆಯಾಗುವುದಾಗಿ ನಂಬಿಸಿ 2014ರ ಡಿಸೆಂಬರ್ 5ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿತ್ತು.
ಆಕೆಯೊಂದಿಗೆ ಹಲವು ಸಮಯದಿಂದ ಒಂದೇ ಮನೆಯಲ್ಲಿ ವಾಸವಾಗಿದ್ದ. ಮಹಿಳೆಗೆ ಎರಡು ಬಾರಿ ಗರ್ಭಪಾತವಾಗಿತ್ತು. ಮೂರನೇ ಬಾರಿ ಗರ್ಭಿಣಿಯಾದಾಗ ಆಕೆ ಮದುವೆಯಾಗುವಂತೆ ಒತ್ತಾಯಿಸಿದಳು. ಆಗ ಆರೋಪಿ ಉಮೇಶ್ ತನಗೆ ಈಗಾಗಲೇ ಮದುವೆಯಾಗಿದ್ದು ಮಗು ಇದೆ ಎಂದು ಹೇಳಿದ. 2016ರ ಫೆಬ್ರವರಿ 16ರಂದು ಮನೆಬಿಟ್ಟು ಹೋಗಿದ್ದ. ಈ ಬಗ್ಗೆ ಮಹಿಳೆ 2016ರ ಮಾರ್ಚ್ 22ರಂದು ಮುಲ್ಕಿ ಠಾಣೆಗೆ ದೂರು ನೀಡಿದ್ದರು. ಎಸಿಪಿಗಳಾದ ಮದನ್ ಗಾಂವ್ಕರ್ ಮತ್ತು ಉದಯ್ ನಾಯ್ಕಿ ತನಿಖೆ ನಡೆಸಿದ್ದರು. ಎಸಿಪಿ ರಾಜೇಂದ್ರ ಡಿ.ಎಸ್. ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 24 ಸಾಕ್ಷಿಗಳನ್ನು ವಿಚಾರಿಸಲಾಗಿತ್ತು. ನ್ಯಾಯಾಧೀಶ ಅಭಯ್ ಧನಪಾಲ್ ಆರೋಪಿಯ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ, ಮದುವೆಯಾಗುವುದಾಗಿ ವಂಚಿಸಿದ್ದಕ್ಕೆ 1 ವರ್ಷ ಸಜೆ ಮತ್ತು 1,000 ರೂ. ದಂಡ ವಿಧಿಸಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News