ಮಂಗಳೂರು: ಕಳವು ಪ್ರಕರಣದಲ್ಲಿ ತಮಿಳುನಾಡಿನ ವ್ಯಕ್ತಿಗೆ ಜೈಲುಶಿಕ್ಷೆ

Update: 2021-09-22 14:23 GMT

ಮಂಗಳೂರು, ಸೆ.22: ನಗರದ ಬಲ್ಮಠದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ತಮಿಳುನಾಡಿನ ವೆಂಕಟೇಶ್ ಎಂಬಾತನಿಗೆ 2ನೇ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

2012ರ ಮೇ 12ರ ರಾತ್ರಿಯಿಂದ ಮರುದಿನ ಬೆಳಗ್ಗಿನ ಅವಧಿಯ ನಡುವೆ ಮನೆಯೊಂದರ ಬಾಗಿಲು ಮುರಿದು 19 ಪವನ್ ಚಿನ್ನಾಭರಣ, ವಜ್ರದ ಸೆಟ್, 2 ಡಿಜಿಟಲ್ ಕೆಮರಾ, 3 ವಾಚ್, 1 ಲ್ಯಾಪ್‌ಟಾಪ್, 1 ಮೊಬೈಲ್ ಸೇರಿದಂತೆ ಒಟ್ಟು 16,17,650 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು.

ಆರೋಪಿಗಳಾದ ತಮಿಳುನಾಡಿನ ವೆಂಕಟೇಶ್, ಮುರುಗೇಶ್ ಮತ್ತು ದಾವಣಗೆರೆಯ ಕಿರಣ್ ಎಂಬವರನ್ನು ಬಂಧಿಸಲಾಗಿತ್ತು. ಕದ್ರಿ ಇನ್ಸ್‌ಪೆಕ್ಟರ್ ಆಗಿದ್ದ ವೆಂಕಟೇಶ್ ಪ್ರಸನ್ನ ತನಿಖೆ ನಡೆಸಿ, ಆಭರಣಗಳನ್ನು ಸ್ವಾಧೀನಪಡಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.2016ರ ಸೆಪ್ಟಂಬರ್ 14ರಂದು ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಇದರ ವಿರುದ್ಧ ಸರಕಾರಿ ಅಭಿಯೋಜಕರು ಮೇಲ್ಮನವಿ ಸಲ್ಲಿದ್ದರು.

ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಆರೋಪಿಗಳ ಪೈಕಿ ವೆಂಕಟೇಶ್ ಎಂಬಾತನ ಅಪರಾಧ ಸಾಬೀತಾಗಿರುವುದಾಗಿ ತೀರ್ಮಾನಿಸಿ ಆರೋಪಿಗೆ ಎರಡು ಕಲಂಗಳಡಿ ತಲಾ 2 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಗಳಲ್ಲಿ ಓರ್ವನಾದ ಮುರುಗೇಶ್ ಮೃತಪಟ್ಟಿದ್ದು, ಅರುಣ್ ಮತ್ತು ಕಿರಣ್ ತಲೆಮರೆಸಿಕೊಂಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News