ಕೊರೋನ ಸೋಂಕು ನಿರ್ವಹಣೆಗೆ 100 ಮಿಲಿಯನ್ ಡಾಲರ್ ಸಾಲ: ವಿಶ್ವಬ್ಯಾಂಕ್ ಮೊರೆಹೋದ ಶ್ರೀಲಂಕಾ

Update: 2021-09-22 14:35 GMT

ಕೊಲಂಬೊ, ಸೆ.22: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ, ಕೊರೋನ ಸೋಂಕು ನಿರ್ವಹಣೆ ಹಾಗೂ ಲಸಿಕೀಕರಣ ಪ್ರಕ್ರಿಯೆಗಾಗಿ 100 ಮಿಲಿಯನ್ ಡಾಲರ್ ತುರ್ತು ಸಾಲ ನೀಡುವಂತೆ ವಿಶ್ವಬ್ಯಾಂಕ್‌ಗೆ ಅರ್ಜಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಶ್ರೀಲಂಕಾದಲ್ಲಿ ಕೊರೋನ ಸೋಂಕಿನಿಂದ 12 ಸಾವಿರಕ್ಕೂ ಹೆಚ್ಚು ಮಂದಿ ಮೃತರಾಗಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಜೊತೆಗೆ ಆರ್ಥಿಕ ಕುಸಿತದಿಂದ ಆಹಾರದ ಬಿಕ್ಕಟ್ಟು ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ನಿಂದ ತುರ್ತು ಸಾಲ ಪಡೆದು ಅಗತ್ಯವಿರುವ ಆರೋಗ್ಯ ವ್ಯವಸ್ಥೆ ಖರೀದಿಸುವ ಆರೋಗ್ಯ ಸಚಿವಾಲಯದ ಶಿಫಾರಸನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಶ್ರೀಲಂಕಾ ಸರಕಾರದ ಹೇಳಿಕೆ ತಿಳಿಸಿದೆ.

14 ಮಿಲಿಯನ್ ಡೋಸ್ ಫೈಝರ್ ಲಸಿಕೆ ಖರೀದಿಸಲು ಹಾಗೂ ಲಸಿಕೀಕರಣಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗೆ ನೆರವು ಒದಗಿಸಲು ವಿಶ್ವಬ್ಯಾಂಕ್ ಒಪ್ಪಿಗೆ ಸೂಚಿಸಿದೆ ಎಂದು ಸರಕಾರ ಹೇಳಿದೆ.  ಸುಮಾರು 21 ಮಿಲಿಯನ್ ಜನಸಂಖ್ಯೆಯಿರುವ ಶ್ರೀಲಂಕಾದಲ್ಲಿ 11 ಮಿಲಿಯನ್‌ಗೂ ಅಧಿಕ ಮಂದಿಗೆ ಕೊರೋನ ವಿರುದ್ಧದ ಎರಡೂ ಲಸಿಕೆ ನೀಡಲಾಗಿದ್ದರೂ(ಬಹುತೇಕ ಮಂದಿಗೆ ಚೀನಾ ನಿರ್ಮಿತ ಲಸಿಕೆ) ಎಪ್ರಿಲ್ ಬಳಿಕ ಮತ್ತೆ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಸಾವಿನ ಪ್ರಕರಣ ಸರಕಾರ ಹೇಳಿರುವದಕ್ಕಿಂತಲೂ ಹೆಚ್ಚಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಪ್ರವಾಸೋದ್ಯಮ ಆದಾಯದ ಪ್ರಮುಖ ಮೂಲವಾಗಿರುವ ಶ್ರೀಲಂಕಾವು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.3.6%ಕ್ಕೆ ಕುಸಿದಿದೆ.

ಶ್ರೀಲಂಕಾ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದರೆ ಆರ್ಥಿಕ ನೆರವು ಒದಗಿಸುವುದಾಗಿ ಅಂತರ್ ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಕರಾರು ಹಾಕಿದ್ದು ಇದನ್ನು ನಿರಾಕರಿಸಲಾಗಿದೆ ಎಂದು ಶ್ರೀಲಂಕಾದ ಸೆಂಟ್ರಲ್‌ಬ್ಯಾಂಕ್ ಗವರ್ನರ್ ಅಜಿತ್ ಕಬ್ರಾಲ್ ಕಳೆದ ವಾರ ಹೇಳಿದ್ದರು. ಆಗಸ್ಟ್ ಅಂತ್ಯದ ವೇಳೆಗೆ ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಿಧಿ 3.55 ಬಿಲಿಯನ್ ಡಾಲರ್‌ನಷ್ಟಿದ್ದರೆ,

ಡಿಸೆಂಬರ್ ಅಂತ್ಯದೊಳಗೆ ಸುಮಾರು 2 ಬಿಲಿಯನ್ ಡಾಲರ್ ವಿದೇಶಿ ಸಾಲ ಮರುಪಾವತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News