ಉಡುಪಿ: ಕೋವಿಡ್ ಗೆ ಇಬ್ಬರು ಬಲಿ, 47 ಮಂದಿಗೆ ಸೋಂಕು ದೃಢ

Update: 2021-09-22 16:14 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.22: ಜಿಲ್ಲೆಯಲ್ಲಿ ಇಂದು ಇಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದ್ದು 47 ಮಂದಿ ಮಾತ್ರ ಹೊಸದಾಗಿ ಪಾಸಿಟಿವ್ ಬಂದಿದ್ದಾರೆ. ಇಂದು 268 ಮಂದಿ ಸೋಂಕಿನಿಂದ ಗುಣಮುಕ್ತ ರಾದರೆ, ಸಕ್ರಿಯರಾಗಿರುವವರ ಸಂಖ್ಯೆ 528ಕ್ಕೆ ಇಳಿದಿದೆಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಕಾರ್ಕಳ ತಾಲೂಕಿನ 43 ವರ್ಷ ಪ್ರಾಯದ ಯುವಕ ಹಾಗೂ 80 ವರ್ಷ ಪ್ರಾಯದಉಡುಪಿಯ ಹಿರಿಯ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಗಂಭೀರವಾದ ಕೋವಿಡ್ ಗುಣಲಕ್ಷಣದೊಂದಿಗೆ ನ್ಯುಮೋನಿಯಾದಿಂದ ಬಳಲುತಿದ್ದು ಮಂಗಳವಾರವಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾದ ಮಹಿಳೆ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ471ಕ್ಕೇರಿದೆ.

ದಿನದಲ್ಲಿ ಸೋಂಕು ದೃಢಪಟ್ಟ 47 ಮಂದಿಯಲ್ಲಿ 22 ಮಂದಿ ಪುರುಷರು ಹಾಗೂ 25 ಮಂದಿ ಮಹಿಳೆಯರು. ಇವರಲ್ಲಿ31 ಮಂದಿ ಉಡುಪಿ ತಾಲೂಕು, ತಲಾ 8 ಮಂದಿ ಕುಂದಾಪುರ ಹಾಗೂ ಕಾರ್ಕಳ ತಾಲೂಕಿನವರು. ಇವರಲ್ಲಿ 9 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 38 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ 268 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 74,908ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 5906 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 75,907ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 11,06,124 ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

ಮೆಗಾ ಲಸಿಕಾ ಮೇಳದಲ್ಲಿ 21,638 ಮಂದಿಗೆ ಲಸಿಕೆ
ಜಿಲ್ಲೆಯಲ್ಲಿ ಇಂದು ನಡೆದ ಮೆಗಾ ಲಸಿಕಾ ಮೇಳದಲ್ಲಿ ರಾತ್ರಿ 7:00ಗಂಟೆ ಯವರೆಗೆ ಒಟ್ಟು 21,638 ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 9061 ಮಂದಿ ಮೊದಲ ಡೋಸ್ ಹಾಗೂ 12,577 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 5396 ಮಂದಿ ಮೊದಲ ಡೋಸ್ ಹಾಗೂ 7654 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 3664 ಮಂದಿ ಮೊದಲ ಡೋಸ್ ಹಾಗೂ 4837 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ದಿನದಲ್ಲಿ 39 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 48 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 8,84,993 ಮಂದಿಗೆ ಮೊದಲ ಡೋಸ್‌ನ್ನು, 3,83,075 ಮಂದಿಗೆ ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಡಿಎಚ್‌ಓ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಲಸಿಕೆ ಲಭ್ಯತೆ ವಿವರ
ಉಡುಪಿ ಜಿಲ್ಲೆಯಲ್ಲಿ ಸೆ.23ರ ಗುರುವಾರ ಕೋವಿಡ್- 19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಪಡೆಯಲು ಸಮೀಪದ ಸರಕಾರಿ ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆ ಬಗ್ಗೆ ವಿಚಾರಿಸಿ, ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಡಿಎಚ್‌ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯವಿದೆ. ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್- 200, ಕುಕ್ಕಿಕಟ್ಟೆ ಎಫ್‌ಪಿಎಐಯ ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್-100, ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ (ಬಿಆರ್‌ಎಸ್) ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-100 ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 30ರೊಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನ ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News