ಉಸಿರುಗಟ್ಟಿ ನರೇಂದ್ರಗಿರಿ ಮೃತ್ಯು: ಮರಣೋತ್ತರ ಪರೀಕ್ಷಾ ವರದಿ

Update: 2021-09-22 16:30 GMT

ಹೊಸದಿಲ್ಲಿ, ಸೆ.22: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ನರೇಂದ್ರ ಗಿರಿ ಅವರು ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆಯಿದೆಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ಅವರ ಕುತ್ತಿಗೆಯಲ್ಲಿ ವಿ ಆಕಾರದ ಗುರುತು ಕಂಡುಬಂದಿರುವುದು, ಉಸಿರುಗಟ್ಟಿ ಅವರು ಸಾವನ್ನಪ್ಪಿರುವುದನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ. ನರೇಂದ್ರಿಗಿರಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ವೈದ್ಯರುಗಳು ಅವರ ದೇಹದ ಒಳಾಂಗಗಳನ್ನು ಸಂರಕ್ಷಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ವಿಶೇಷ ತನಿಖಾ ತಂಡವು ತನ್ನ ತನಿಖೆಯನ್ನು ಮುಂದುವರಿಸಲಿದೆ. ಬುಧವಾರ ಬೆಳಗ್ಗೆ ಐದು ಮಂದಿ ವೈದ್ಯರ ತಂಡವು ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿತು, ಇಡೀ ಪ್ರಕ್ರಿಯೆಯನ್ನು ವೀಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ವರದಿಯನ್ನು ಮೊಹರುಮಾಡಿದ ಲಕೋಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಸೋಮವಾರ ಸಂಜೆ 5:30ರ ವೇಳೆಗೆ ಮಹಂತ ನರೇಂದ್ರ ಗಿರಿ ಅವರು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ಆಶ್ರಮದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿತ್ತು. ಸ್ಥಳದಲ್ಲಿ ಆತ್ಮಹತ್ಯಾಪತ್ರವೊಂದು ಕೂಡಾ ಪತ್ತೆಯಾಗಿದ್ದು, ಅದರಲ್ಲಿ ಅವರು ತನ್ನ ಶಿಷ್ಯ ಆನಂದಗಿರಿ, ಬಡೆ ಹನುಮಾನ್ ಮಂದಿರದ ಮುಖ್ಯ ಅರ್ಚಕ ಆದ್ಯ ಪ್ರಸಾದ್‌ತಿವಾರಿ ಹಾಗೂ ಸಂದೀಪ್ ತಿವಾರಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗಿರುವುದಾಗಿ ಡೆತ್‌ನೋಟ್‌ನಲ್ಲಿ ಅವರು ಬರೆದಿದ್ದರು ಎನ್ನಲಾಗಿದೆ.

ನರೇಂದ್ರ ಗಿರಿ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್ ಅಧಿಕಾರಿಗಳು ಸ್ವಾಮಿ ಆನಂದಂಗಿರಿ ಹಾಗೂ ಆದ್ಯ ತಿವಾರಿ ಅವರನ್ನು ಬಂಧಿಸಿದೆ. ಇವರಿಬ್ಬರೂ ನರೇಂದ್ರಗಿರಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲವೆಂದು ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News