ಉ.ಪ್ರ.ಚುನಾವಣೆಗಾಗಿ ಭೀಮ್ ಪಾರ್ಟಿ ಜೊತೆ ಬಿಜೆಪಿಯ ಮಾಜಿ ಮಿತ್ರಪಕ್ಷ ಎಸ್‌ಬಿಎಸ್‌ಪಿ ಮೈತ್ರಿ

Update: 2021-09-22 16:31 GMT
ಸಾಂದರ್ಭಿಕ ಚಿತ್ರ

ಬಲಿಯಾ,ಸೆ.22: ಭೀಮ್ ಪಾರ್ಟಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ಶೀಘ್ರವೇ ಭಾಗಿದಾರಿ ಸಂಕಲ್ಪ ಮೋರ್ಚಾ(ಬಿಎಸ್‌ಎಂ)ದ ಭಾಗವಾಗಲಿದ್ದಾರೆ ಮತ್ತು ಇದನ್ನು ಅ.27ರಂದು ನಡೆಯಲಿರುವ ರ‍್ಯಾಲಿಯಲ್ಲಿ ವಿಧ್ಯುಕ್ತವಾಗಿ ಪ್ರಕಟಿಸಲಾಗುವುದು ಎಂದು ಬಿಜೆಪಿಯ ಮಾಜಿ ಮಿತ್ರಪಕ್ಷವಾಗಿರುವ ಸುಹೇಲದೇವ್ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ)ಯ ಅಧ್ಯಕ್ಷ ಓಂ ಪ್ರಕಾಶ ರಾಜಭರ್ ಅವರು ಬುಧವಾರ ಹೇಳಿದರು.

ಮೋರ್ಚಾ ರಾಜಭರ್ ನೇತೃತ್ವದ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮೈತ್ರಿಕೂಟವಾಗಿದೆ. ಮಂಗಳವಾರ ಲಕ್ನೋದಲ್ಲಿ ತಾನು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಆಝಾದ್ ಜೊತೆ ಯಶಸ್ವಿ ಮಾತುಕತೆಗಳನ್ನು ನಡೆಸಿದ್ದೇನೆ. ಆಝಾದ್ ಬಿಎಸ್‌ಎಂ ಸೇರಲು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜಭರ್ ತಿಳಿಸಿದರು.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಬಿಎಸ್‌ಪಿ ಮತ್ತು ಅದರ ಬಿಎಸ್‌ಎಂ ಜೊತೆ ಮೈತ್ರಿಯೊಂದಿಗೆ ಕನಿಷ್ಠ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಎಐಎಂಐಎಂ ಇತ್ತೀಚಿಗೆ ಪ್ರಕಟಿಸಿತ್ತು.

ಯೋಗಿ ಆದಿತ್ಯನಾಥ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ರಾಜಭರ್ 2019ರ ಲೋಕಸಭಾ ಚುನಾವಣೆಗೆ ಮುನ್ನ ರಾಜೀನಾಮೆ ಸಲ್ಲಿಸಿದ್ದರು. ನಂತರ ಬಿಎಸ್‌ಎಂ ಅನ್ನು ಹುಟ್ಟುಹಾಕಿದ್ದರು.

ಎಸ್‌ಬಿಎಸ್‌ಪಿಯ ಸ್ಥಾಪನಾ ದಿನವಾದ ಅ.27ರಂದು ಮಾವು ಜಿಲ್ಲೆಯ ಹಲಧರಪುರದಲ್ಲಿ ಬಿಎಸ್‌ ಎಂನ ಮೊದಲ ಬೃಹತ್ ರ‍್ಯಾಲಿ ನಡೆಯಲಿದ್ದು,ಆಝಾದ್ ಅವರು ಮೋರ್ಚಾ ಸೇರ್ಪಡೆ ಕುರಿತು ವಿಧ್ಯುಕ್ತವಾಗಿ ಪ್ರಕಟಿಸಲಿದ್ದಾರೆ. ಮೋರ್ಚಾದ ಮುಂದಿನ ರ‍್ಯಾಲಿಯು ನ.27ರಂದು ಹರ್ದೋಯಿ ಜಿಲ್ಲೆಯ ಸಂಡೀಲಾದಲ್ಲಿ ನಡೆಯಲಿದೆ. ನಂತರ ಕಾನ್ಪುರ,ಮೊರಾದಾಬಾದ್ ಮತ್ತು ಬಸ್ತಿಯಲ್ಲಿ ರ‍್ಯಾಲಿಗಳು ನಡೆಯಲಿವೆ. ಈ ಎಲ್ಲ ರ‍್ಯಾಲಿಗಳನ್ನುದ್ದೇಶಿಸಿ ಉವೈಸಿ ಮತ್ತು ಆಝಾದ್ ಜೊತೆ ಎಲ್ಲ ಪಕ್ಷಗಳ ನಾಯಕರೂ ಮಾತನಾಡಲಿದ್ದಾರೆ ಎಂದು ರಾಜಭರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News