ವರ್ಷದ ಹಿಂದೆ ನಾಪತ್ತೆಯಾಗಿದ್ದ ಯೋಧನ ಕೊಳೆತ ಶವ ಕಾಶ್ಮೀರದ ಕುಲ್ಗಾಮ್‌ನಲ್ಲಿ ಪತ್ತೆ

Update: 2021-09-22 16:35 GMT
ಸಾಂದರ್ಭಿಕ ಚಿತ್ರ

ಶ್ರೀನಗರ,ಸೆ.22: ಕಳೆದ ವರ್ಷದ ಆಗಸ್ಟ್‌ನಲ್ಲಿ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಯೋಧ ಶಾಕಿರ್ ಮಂಝೂರ್ ವಾಗೇ ಅವರ ಶವವು ಕೊಳೆತ ಸ್ಥಿತಿಯಲ್ಲಿ ಬುಧವಾರ ಕುಲ್ಗಾಮ್ ಜಿಲ್ಲೆಯ ಮುಹಮ್ಮದ್ ಪೋರಾ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೃತ ಯೋಧನ ಶವವನ್ನು ಗುರುತಿಸಿರುವ ತಂದೆ ಮಂಝೂರ್ ಅಹ್ಮದ್ ವಾಗೇ ಅವರು,'ಡಿಎನ್‌ಎ ಪರೀಕ್ಷೆಗಾಗಿ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತೇವೆ ಮತ್ತು ನಮ್ಮ ಧಾರ್ಮಿಕ ವಿಧಿಗಳಂತೆ ನಾವು ಮೃತದೇಹವನ್ನು ದಫನ ಮಾಡಬಹುದು 'ಎಂದು ಪೊಲೀಸರು ಹೇಳಿರುವುದಾಗಿ ಎಂದು ಸುದ್ದಿಗಾರರಿಗೆ ತಿಳಿಸಿದರು.

162 ಬಟಾಲಿಯನ್‌ನಲ್ಲಿ ರೈಫಲ್‌ಮನ್ ಆಗಿದ್ದ ಶಾಕಿರ್ (24) 2020,ಆ.2ರಂದು ಈದ್ ಆಚರಿಸಲು ಶೋಪಿಯಾನ್ ಜಿಲ್ಲೆಯ ರೇಶಿಪುರಾ ಗ್ರಾಮದ ತನ್ನ ಮನೆಗೆ ಆಗಮಿಸಿದ್ದರು. ಅದೇ ದಿನ ತನ್ನ ಕಾರಿನಲ್ಲಿ ಸಮೀಪದ ಸೇನಾ ಶಿಬಿರಕ್ಕೆಂದು ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು.

ಶಾಕಿರ್ ಅವರ ಕಾರು ಸುಟ್ಟಸ್ಥಿತಿಯಲ್ಲಿ ನೆರೆಯ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಅವರನ್ನು ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಮರುದಿನ ಹೊರಡಿಸಿದ್ದ ಹೇಳಿಕೆಯಲ್ಲಿ ತಿಳಿಸಿತ್ತು.

ಶಾಕಿರ್ ಕಾಣೆಯಾದ ಐದು ದಿನಗಳ ಬಳಿಕ ಸಮೀಪದ ತೋಟವೊಂದರಲ್ಲಿ ಅವರ ರಕ್ತಸಿಕ್ತ ಬಟ್ಟೆಗಳನ್ನು ಕುಟುಂಬವು ಪತ್ತೆ ಹಚ್ಚಿತ್ತು.

ಶಾಕಿರ್ ನಾಪತ್ತೆಯಾದ ದಿನವೇ ಶೋಪಿಯಾನ್ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ಕೆಲವು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡುವ ಉದ್ದೇಶದಿಂದ ಶಾಕಿರ್‌ರನ್ನು ಅಪಹರಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ತನ್ನ ಕಿರಿಯ ಪುತ್ರ ಶಾನವಾಝ್ ಮಂಝೂರ್ ಸೇರಿದಂತೆ ಕನಿಷ್ಠ ಮೂವರು ತಾವು ಶಾಕಿರ್‌ರನ್ನು ಅವರ ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಕಂಡಿದ್ದಾಗಿ ತನಗೆ ತಿಳಿಸಿದ್ದಾರೆ ಎಂದು ಮಂಝೂರ್ ಹೇಳಿದ್ದರು.

 ರೇಶಿಪೋರಾದ ಹೊರವಲಯದಲ್ಲಿ ನಿರ್ಜನ ಸ್ಥಳವೊಂದರಲ್ಲಿ ಕಾರನ್ನು ಅಡ್ಡಗಟ್ಟುತ್ತಿದ್ದನ್ನು ತಾವು ನೋಡಿದ್ದಾಗಿ ಇತರ ಕೆಲವರು ತನಗೆ ತಿಳಿಸಿದ್ದರು. ಸುಮಾರು 3-4 ಕಾರುಗಳು ಮತ್ತು ಎರಡು ಬೈಕ್‌ಗಳು ಅಪಹರಣದಲ್ಲಿ ಭಾಗಿಯಾಗಿದ್ದವು. ಕೆಲವರು ಕಾರಿನೊಳಗೆ ಪ್ರವೇಶಿಸಿ ಮುಂದಕ್ಕೆ ಚಲಿಸುವಂತೆ ಶಾಕಿರ್‌ಗೆ ಸೂಚಿಸಿದ್ದರು ಮತ್ತು ಕೆಲವರು ಇತರ ವಾಹನಗಳಲ್ಲಿ ಅದನ್ನು ಹಿಂಬಾಲಿಸಿದ್ದರು ಎಂದು ಅವರು ಹೇಳಿದ್ದರು.

ಡಿಸೆಂಬರ್‌ನಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಶಾಕಿರ್‌ರ ಕಮಾಂಡಿಂಗ್ ಆಫೀಸರ್‌ಗೆ ಕಳುಹಿಸಿದ್ದ ಶೋಪಿಯಾನ್ ಪೊಲೀಸರು, ತಾವು ಹಲವರನ್ನು ವಿಚಾರಣೆಗೊಳಪಡಿಸಿದ್ದು ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿಸಿದ್ದರು.

ಶಾಕಿರ್ ನಾಪತ್ತೆಯಾದ ಆರು ತಿಂಗಳ ಬಳಿಕ ಚಿನಾರ್ ಕಾರ್ಪ್ಸ್ ಅವರು ಮೃತರಾಗಿದ್ದಾರೆ ಎಂದು ಪರಿಗಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News