ಸೌಕೂರು ಏತ ನೀರಾವರಿ ಕಾಮಗಾರಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Update: 2021-09-22 16:41 GMT

ಕುಂದಾಪುರ, ಸೆ.22: ಸರಕಾರದ ಮಹತ್ವಕಾಂಕ್ಷೆ ಯೋಜನೆಯಾಗಿರುವ ಸೌಕೂರು ಏತ ನೀರಾವರಿ ಕಾಮಗಾರಿಯ ಅವ್ಯವಸ್ಥೆಯನ್ನು ಖಂಡಿಸಿ ಸಿಪಿಎಂ ಪಕ್ಷ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಗುಲ್ವಾಡಿಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿಭಟನೆ ನಡೆಸಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕಾಮಗಾರಿಯಿಂದ ಹಾನಿಗೊಳಗಾದ ಕುಡಿಯುವ ನೀರಿನ ಬಾವಿ ದುರಸ್ತಿಗೊಂಡಿಲ್ಲ. ಚರಂಡಿಯೊಳಗೆ ಅಳವಡಿಸಿದ ಬ್ರಹದಾಕಾರದ ವಿದ್ಯುತ್ ಕಂಬಗಳು ಗುಲ್ವಾಡಿಯ ಗ್ರಾಮ ಭವಿಷ್ಯದಲ್ಲಿ ಅಭಿವ್ರದ್ಧಿಗೆ ತೊಡಕಾಗ ಲಿದೆ. ಈ ಬಗ್ಗೆ ಶಾಸಕರು ಲೋಕೊಪಯೋಗಿ ಇಲಾಖೆ ಜತೆ ಮಾತುಕತೆ ನಡೆಸಿ ರಸ್ತೆ ಅಗಲಿಕರಣಕ್ಕೆ ತೊಡಕಾಗದಂತೆ ಕ್ರಮವಹಿಸಬೇಕು. ಸೌಪರ್ಣಿಕ ನದಿ ತೀರದಿಂದ ಖಾಸಗಿ ಜಾಗದವರನ್ನು ಮನವೊಲಿಸಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಬೈಂದೂರು ಶಾಸಕರು ಕಾಳಜಿ ವಹಿಸಿದರೆ ಗುಲ್ವಾಡಿ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಎಚ್.ನರಸಿಂಹ ಮಾತನಾಡಿ, ಏತ ನೀರಾವರಿ ಯೋಜನೆಯಿಂದ ಗುಲ್ವಾಡಿಯ ಸುತ್ತಮತ್ತಲ ಗ್ರಾಮಗಳಿಗೆ ಬಹಳಷ್ಟು ಪ್ರಯೋಜನವಿದೆ. ಆದರೆ ಸ್ಥಳೀಯ ಗ್ರಾಪಂ ಆಡಳಿತವನ್ನು ಕಡೆಗಣಿಸಿ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯಾಡಳಿತ ಹಾಗು ಜನರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದ ಸ್ಥಳೀಯ ಜನರು ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ. ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದರು.

ಸ್ಥಳೀಯ ಮುಖಂಡ ಜಿ.ಡಿ.ಪಂಜು ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಟನೆಯ ನಂತರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಅವರಿಗೆ ಮನವಿ ನೀಡಲಾಯಿತು. ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ಕೋಣಿ, ಜಿ.ಬಿ.ಮುಹಮ್ಮದ್, ಜಮಾಲ್ ಗುಲ್ವಾಡಿ, ಗ್ರಾಪಂ ಸದಸ್ಯ ಹಂಝ, ಅಣ್ಣಪ್ಪ ಅಬ್ಬಿಗುಡ್ಡಿ, ನಾಗರಾಜ, ನೀಲಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News