ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಸುರೇಂದ್ರನ್ ರಿಗೆ ಕ್ರೈಂ ಬ್ರಾಂಚ್ ಮತ್ತೆ ನೋಟಿಸ್

Update: 2021-09-23 05:15 GMT

ಕಾಸರಗೋಡು, ಸೆ.23: ಕಳೆದ ಕೇರಳ ವಿಧಾನಸಭಾ ಚುನಾವಣೆಯ ವೇಳೆ ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ರಿಗೆ ತನಿಖಾ ತಂಡವಾದ  ಕ್ರೈಂ ಬ್ರಾಂಚ್  ಮತ್ತೆ ನೋಟಿಸ್ ನೀಡಿದೆ.

ಮೊಬೈಲ್ ಫೋನ್ ನ್ನು ತಪಾಸಣೆಗೆ ಹಾಜರುಪಡಿಸುವಂತೆ  ನೋಟಿಸ್ ನಲ್ಲಿ ಸೂಚಿಸಿದೆ ಎಂದು ತಿಳಿದುಬಂದಿದೆ.

ಸುರೇಂದ್ರನ್ ರನ್ನು ಸೆ.15ರಂದು ಕ್ರೈಂ ಬ್ರಾಂಚ್  ವಿಚಾರಣೆ ನಡೆಸಿತ್ತು. ಇದೀಗ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಮೊಬೈಲ್ ಫೋನ್ ತಪಾಸಣೆಗೆ ನಿರ್ಧರಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸುರೇಂದ್ರನ್ ಅವರು ಬಿಎಸ್ಪಿ ಅಭ್ಯರ್ಥಿ ಕೆ.ಸುಂದರರಿಗೆ ನಾಮಪತ್ರ ಹಿಂಪಡೆಯಲು ಎರಡೂವರೆ ಲಕ್ಷ ರೂ., ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ಆಮಿಷವೊಡ್ಡಿದ್ದು ಮಾತ್ರವಲ್ಲ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ನಿರ್ಣಾಯಕ ಸುಳಿವು ಆಗಿರುವ ಮೊಬೈಲ್ ಫೋನ್ ಕಳೆದು ಹೋಗಿರುವುದಾಗಿ ಸುರೇಂದ್ರನ್  ಹೇಳಿಕೆ ನೀಡಿದ್ದು, ಆದರೆ  ಮೊಬೈಲ್ ಫೋನ್  ಈಗಲೂ ಬಳಕೆಯಲ್ಲಿದೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ. ಈ ಫೋನ್ ನ್ನು ಒಂದು ವಾರದೊಳಗೆ ಹಾಜರುಪಡಿಸುವಂತೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News