ಪಾಣತ್ತೂರು ಬಸ್ಸು ದುರಂತ ಪ್ರಕರಣ: ಮೃತಪಟ್ಟ 7 ಮಂದಿಯ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ

Update: 2021-09-23 05:38 GMT
ಪಾಣತ್ತೂರಿನಲ್ಲಿ ಜನವರಿ 3ರಂದು ಸಂಭವಿಸಿದ ಬಸ್ ಅಪಘಾತದ ಫೈಲ್ ಫೋಟೋ 

ಪುತ್ತೂರು, ಸೆ.23: ಒಂಭತ್ತು ತಿಂಗಳ ಹಿಂದೆ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿರುವ ಕಾಸರಗೋಡು ತಾಲೂಕಿನ ಪಾಣತ್ತೂರಿನಲ್ಲಿ ಸಂಭವಿಸಿದ್ದ ಖಾಸಗಿ ಸಿಸಿ ಬಸ್ಸು ಅಪಘಾತದಲ್ಲಿ ಮೃತಪಟ್ಟ ಪುತ್ತೂರು ವಿಧಾನ ಸಭಾ ಕ್ಷೇತ್ರದ ಐವರು ಸೇರಿದಂತೆ ಒಟ್ಟು 7 ಮಂದಿಯ ಕುಟುಂಬಕ್ಕೆ ತಲಾ ರೂ. 2 ಲಕ್ಷ ಪರಿಹಾರಧನವನ್ನು ಕರ್ನಾಟಕ ಸರ್ಕಾರ  ಮಂಜೂರುಗೊಳಿಸಿದೆ.

ಜನವರಿ 3ರಂದು ಮದುವೆ ದಿಬ್ಬಣ ಹೊರಟಿದ್ದ ಬಸ್ಸು ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿನ ಚೋಮ ನಾಯ್ಕ ಎಂಬವರ ಪುತ್ರ ರಾಜೇಶ್(38) ಅವರ ಪುತ್ರ ಆದರ್ಶ(14), ಆರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿ ನಾರಾಯಣ ನಾಯ್ಕ ಅವರ ಪುತ್ರಿ ಸುಮತಿ(26), ಪಾಣಾಜೆ ಗ್ರಾಮದ ಆರ್ಲಪದವು ಅರ್ಧಮೂಲೆ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರ ಶ್ರೇಯಸ್(13), ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಕಳೆಂಜಿಲ ನಿವಾಸಿ ವಸಂತ ನಾಯ್ಕ ಎಂಬವರ ಪತ್ನಿ ಜಯಲಕ್ಷ್ಮಿ(36), ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕುಕ್ಕಂದೂರು ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರ ರವಿಚಂದ್ರ(46) ಹಾಗೂ ಬಸ್ಸಿನ ನಿರ್ವಾಹಕ ಬಂಟ್ವಾಳ ತಾಲೂಕಿನ ನರಿಕೊಂಬು ನಿವಾಸಿ ಶ್ರೀಧರ ಪೂಜಾರಿ ಎಂಬವರ ಪುತ್ರ ಶಶಿಧರ್ ಮೃತಪಟ್ಟಿದ್ದರು.

ಇವರೆಲ್ಲರೂ ಪುತ್ತೂರು ತಾಲೂಕಿನ ಬಲ್ನಾಡಿನಿಂದ ಖಾಸಗಿ ಬಸ್ಸಿನಲ್ಲಿ ಮದುವೆ ದಿಬ್ಬಣ ಹೊರಟಿದ್ದರು. ಖಾಸಗಿ ಸಿಸಿ ಬಸ್ಸಿಗೆ ಕೇರಳದ ಪರವಾನಿಗೆ ಇರಲಿಲ್ಲ. ಕರ್ನಾಟಕದ ಗಡಿಯಲ್ಲಿರುವ ಕೇರಳದ ಭಾಗವಾಗಿರುವ ಪಾಣತ್ತೂರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಅಪಘಾತಕ್ಕೆ ಈಡಾಗಿ ದುರಂತ ಸಂಭವಿಸಿತ್ತು. ಈ ನಿಟ್ಟಿನಲ್ಲಿ ಸರ್ಕಾರವು ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತಪಟ್ಟ 7 ಕುಟುಂಬಕ್ಕೂ ತಲಾ ರೂ. 2 ಲಕ್ಷದಂತೆ ಒಟ್ಟು ರೂ. 14 ಲಕ್ಷ ಪರಿಹಾರಧನ ಮಂಜೂರುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News