ಎನ್.ಡಬ್ಲ್ಯು.ಎಫ್. ರಾಜ್ಯ ಪ್ರತಿನಿಧಿ ಸಭೆ: ಪದಾಧಿಕಾರಿಗಳ ಆಯ್ಕೆ

Update: 2021-09-23 06:19 GMT
ಫರ್ಝಾನ ಮುಹಮ್ಮದ್(ಎಡಚಿತ್ರ), ಬೀಬಿ ಆಯಿಶ

ಪುತ್ತೂರು, ಸೆ.23: ನ್ಯಾಶನಲ್ ವಿಮೆನ್ಸ್ ಫ್ರಂಟ್(ಎನ್.ಡಬ್ಲ್ಯು.ಎಫ್.) ಕರ್ನಾಟಕ ಇದರ ರಾಜ್ಯ ಪ್ರತಿನಿಧಿ ಸಭೆಯು ಸೆ.20ರಂದು ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಶಬಾನ ಬೆಂಗಳೂರು ಧ್ವಜಾರೋಹಣ ನೆರವೇರಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ತಬಸ್ಸುಮ್ ಅರಾ ವಾರ್ಷಿಕ ವರದಿಯನ್ನು ಮಂಡಿಸಿದರು. 2021ನೇ ಸಾಲಿನ ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ರಾಷ್ಟ್ರೀಯ ಸಮಿತಿ ಸದಸ್ಯರಾದ ಲುಬ್ನಾ ಮಿನಾಝ್, ನೌಶೀರಾ ಕೆಮ್ಮಾರ ನಡೆಸಿಕೊಟ್ಟರು.

2021-23ನೇ ಸಾಲಿನ ರಾಜ್ಯಾಧ್ಯಕ್ಷೆಯಾಗಿ ಫರ್ಝಾನ ಮುಹಮ್ಮದ್, ಉಪಾಧ್ಯಕ್ಷೆಯಾಗಿ ಸೈದಾ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಬೀಬಿ ಆಯಿಶ ಬೆಂಗಳೂರು, ಕಾರ್ಯದರ್ಶಿಯಾಗಿ ರಮ್ಲತ್ ವಾಮಂಜೂರು, ಕೋಶಾಧಿಕಾರಿಯಾಗಿ ಫಾತಿಮಾ ನಸೀಮಾ ಮಂಗಳೂರು ಆಯ್ಕೆಯಾದರು.

  ತಬಸ್ಸುಮ್ ಅರಾ ತುಮಕೂರು, ನಸೀಮ್ ಝುರೈ ಉಡುಪಿ, ಝುಲೈಕಾ ಮಂಗಳೂರು, ನುಜ್ಹತ್ ಕಲಬುರಗಿ, ಶಬಾನಾ ದಾವಣಗೆರೆ, ಝಕಿಯಾ ಮಡಿಕೇರಿ, ಯಾಸ್ಮೀನ್ ಬೆಳ್ತಂಗಡಿ, ನಾಝಿಯಾ ವಿಜಯಪುರ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಿ

ಪ್ರತೀ 15 ನಿಮಿಷಗಳಿಗೊಮ್ಮೆ ದೇಶದಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು, ಈ ಪೈಶಾಚಿಕ ಕೃತ್ಯಗಳು ಖಂಡನೀಯ. ಇತ್ತೀಚೆಗೆ ಅತ್ಯಾಚಾರ, ಮಹಿಳಾ ದೌರ್ಜನ್ಯ, ಅಕ್ರಮ, ಮಹಿಳಾ ತಾರತಮ್ಯಗಳು ಕರ್ನಾಟಕದಲ್ಲೂ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಮಹಿಳಾ ದೌರ್ಜನ್ಯದಲ್ಲಿ ಕರ್ನಾಟಕವು ಉತ್ತರ ಪ್ರದೇಶಕ್ಕೆ ಪ್ರತಿಸ್ಪರ್ಧೆ ನೀಡುವಂತಿದೆ. ಅದರಲ್ಲೂ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅತ್ಯಾಚಾರ ಘಟನೆ, ತುಮಕೂರಿನ ದಲಿತ ವಿದ್ಯಾರ್ಥಿನೀಯರ ಮೇಲೆ ನಡೆದ ಹಲ್ಲೆ ಘಟನೆ ಮುಂತಾದವುಗಳು ಗಮನಾರ್ಹ. ಆದ್ದರಿಂದ ಮಹಿಳಾ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸಿ ಸರಕಾರವು ಆರೋಪಿಗಳು ಯಾವುದೇ ಪ್ರಭಾವ ಬಳಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತಹ ಕಠಿಣ ಕಾನೂನು ಜಾರಿಯಾಗಬೇಕು. ಶಾಲೆಗಳಲ್ಲಿ ಸ್ವಯಂ ರಕ್ಷಣಾ ಕಲೆಗಳನ್ನು ಕಡ್ಡಾಯಗೊಳಿಸಬೇಕು. ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಇದಕ್ಕಾಗಿ ವಿಶೇಷ ತನಿಖಾ ಆಯೋಗ ರಚಿಸಿ, ಪ್ರತೀ ಜಿಲ್ಲೆಗಳಲ್ಲೂ ಇವು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಬೇಕೆಂದು ಸಭೆ ಒತ್ತಾಯಿಸುತ್ತದೆ.

ಬೆಲೆ ಏರಿಕೆ ಸಮಸ್ಯೆಯನ್ನು ಬಗೆಹರಿಸಿ
ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಅಡುಗೆ ಅನಿಲವು ಅತ್ಯಂತ ಅನಿವಾರ್ಯವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಪ್ರತೀ ಸಿಲಿಂಡರಿನ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅದಲ್ಲದೇ ಕೇವಲ 15 ದಿನಗಳಲ್ಲಿ 50 ರೂ. ಏರಿಕೆಯಾಗಿದ್ದು, ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಅದರ ಜೊತೆಗೆ ಆಹಾರ ಸಾಮಗ್ರಿಗಳು, ದಿನಬಳಕೆ ವಸ್ತುಗಳು, ಔಷಧಿಗಳು, ಇನ್ನಿತರ ಅಗತ್ಯ ವಸ್ತುಗಳ ಬೆಲೆಗಳು ಕೂಡಾ ಗಗನಕ್ಕೇರುತ್ತಿರುವುದು ಗೃಹ ಹಿಂಸೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವು ಸಮಾಜಕ್ಕೆ ಮಾರಕವಾಗಲಿದೆ ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಆದ್ದರಿಂದ ಸರಕಾರವು ಇದನ್ನು ಗಂಭಿರವಾಗಿ ಪರಿಗಣಿಸಿ ಇಂತಹ ಜನ ವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಹಿಂಪಡೆದು ಆತಂಕರಹಿತ ಜೀವನ ನಿರ್ವಹಣೆಗೆ ಅನುವು ಮಾಡಿಕೊಡಬೇಕೆಂದು ಸಭೆಯು ಒತ್ತಾಯಿಸುತ್ತದೆ.

ಎನ್.ಇ.ಪಿ. ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಿ
ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡದೇ ರಾಷ್ಟ್ರೀಯ ಶಿಕ್ಷಣ ನೀತಿ 2020ಯನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮವು ಅಸಂವಿಧಾನಿಕವಾಗಿದೆ. ಈ ನೀತಿಯು ಶಿಕ್ಷಣದ ಏಕಸಾಮ್ಯತೆ, ಖಾಸಗೀಕರಣ ಹಾಗೂ ಕೇಸರೀಕರಣಕ್ಕೆ ಎಡೆ ಮಾಡಿಕೊಡುತ್ತದೆ. ಇದರಿಂದಾಗಿ ಮಹಿಳಾ ಶಿಕ್ಷಣಕ್ಕೆ ಆತಂಕ ಎದುರಾಗಿದ್ದು, ಇದು ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಆದುದರಿಂದ ಸರಕಾರವು ಈ ನೀತಿಯ ಸಾಧಕ-ಬಾಧಕಗಳ ಬಗ್ಗೆ ವಿಧಾನ ಸಭೆ, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಸ್ತೃತ ಚರ್ಚೆ ನಡೆಸಿ ಅತ್ಯಾಧುನಿಕ ಮೌಲ್ಯಾಧಾರಿತ ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ.

ಫರ್ಝನಾ ಕಾರ್ಯಕ್ರಮ ನಿರೂಪಿಸಿದರು. ಯಾಸ್ಮೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News