ಪೊಲೀಸ್ ಠಾಣೆಗಳಲ್ಲಿ ಸಮಸ್ಯೆ ಎದುರಾದಾಗ ನೇರ ನನ್ನ ಗಮನಕ್ಕೆ ತನ್ನಿ: ದ.ಕ. ಎಸ್ಪಿ ಋಷಿಕೇಶ್

Update: 2021-09-23 10:10 GMT

ಮಂಗಳೂರು, ಸೆ.23: ಪ್ರಕರಣಗಳ ದೂರು ನೀಡಲು ಹೋದ ಸಂದರ್ಭ ಪೊಲೀಸ್ ಠಾಣೆಗಳಲ್ಲಿ ಕೆಲವೊಮ್ಮೆ ಸೂಕ್ತವಾಗಿ ಸ್ಪಂದಿಸಲಾಗುವುದಿಲ್ಲ ಎಂಬ ದಲಿತ ನಾಯಕರ ದೂರಿಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಅಂತಹ ಸಮಸ್ಯೆ ಎದುರಾದಾಗ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದ್ದಾರೆ

ದ.ಕ. ಜಿಲ್ಲಾ ಪೊಲೀಸ್ ಸಭಾ ಭವನದಲ್ಲಿ ಇಂದು ನಡೆದ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಸಮಸ್ಯೆಗಳನ್ನು ಆಲಿಸಿದರು.

ದಲಿತ ನಾಯಕ ಸದಾಶಿವ ಎಂಬವರು ಕೆಲ ಠಾಣೆಗಳಲ್ಲಿ ದಲಿತರು ದೂರು ನೀಡಲು ಹೋದಾಗ ಅಗೌರವ ತೋರಿಸಲಾಗುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಸಕ್ತ ಎಲ್ಲಾ ಠಾಣೆಗಳಲ್ಲೂ ಸಿಸಿಟಿವಿ ಕ್ಯಾಮರಾ, ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಮರ್ಪಕವಾಗಿದೆ. ಹಾಗಿರುವಾಗ ಯಾರೇ ದೂರು ನೀಡಲು ಬಂದರೂ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅದಾಗಿಯೂ ಸಮಸ್ಯೆಯಾದಲ್ಲಿ ನನಗೆ ಅಥವಾ ಎಎಸ್ಪಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಯಾವುದೇ ಘಟನೆ ಸಂಭವಿಸಿದಾಗ ದೂರು ನೀಡಿದರೆ ಪ್ರಕರಣ ದಾಖಲಿಸುವಂತೆ ಎಲ್ಲಾ ಠಾಣೆಗಳಿಗೂ ಸೂಚನೆ ನೀಡಲಾಗಿದೆ. ಆದರೆ ದೂರು ದಾಖಲಾದ ಮಾತ್ರಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಸಾಕ್ಷ್ಯಾಧಾರದ ಹೊರತಾಗಿ ಬಂಧನ ಮಾಡಲು ಸಾಧ್ಯವಿಲ್ಲ ಎಂದು ದಲಿತ ನಾಯಕರೊಬ್ಬರ ಸಮಸ್ಯೆಗೆ ಎಸ್ಪಿ ಋಷಿಕೇಶ್ ಸ್ಪಷ್ಟಪಡಿಸಿದರು.

ದಲಿತ ಕಾಲನಿಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ವೃದ್ಧಿ

ದಲಿತ ಕಾಲನಿಗಳಿಗೆ ಪೊಲೀಸರ ಭೇಟಿ ಅಪರೂಪವಾಗುತ್ತಿದೆ ಎಂಬ ದಲಿತ ನಾಯಕರೊಬ್ಬರು ದೂರಿದಾಗ, ಈ ಬಗ್ಗೆ ಕ್ರಮ ವಹಿಸಲಾಗುವುದು. ಬೀಟ್ ವ್ಯವಸ್ಥೆಯನ್ನು ಕೂಡಾ ಸಮರ್ಪಕವಾಗಿ ನಡೆಸಲು ಸೂಚನೆ ನೀಡಲಾಗುವುದು ಎಂದರು ಹೇಳಿದರು.

ಕೊಪ್ಪಳದಲ್ಲಿ ದಲಿತ ಕುಟುಂಬದ ಮಗುವೊಂದು ದೇವಸ್ಥಾನ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಡ ವಿಧಿಸಿದ ಪ್ರಕರಣವನ್ನು ಸಭೆಯಲ್ಲಿ ದಲಿತ ನಾಯಕರು ತೀವ್ರವಾಗಿ ಖಂಡಿಸುವುದಾಗಿ ಹೇಳಿದರಲ್ಲದೆ, ಈ ಪ್ರಕರಣ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು.

ಧಾರ್ಮಿಕ ಕ್ಷೇತ್ರಗಳಲ್ಲಿ ದಲಿತರ ಅವಹೇಳನ, ನಿಂದಿಸುವ ಪ್ರಕರಣಗಳು ನಡೆಯುತ್ತಿರುತ್ತದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ದಲಿತ ನಾಯರು ಆಗ್ರಹಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಎಸ್ಪಿ ಋಷಿಕೇಶ್ ಸೊನಾವಣೆ, ನಮ್ಮಲ್ಲಿ ಅಂತಹ ಪ್ರಕರಣಗಳು ನಡೆಯುತ್ತಿಲ್ಲ. ಇಂತಹ ವಿಷಯದಲ್ಲಿ ಕ್ರಮ ಕೈಗೊಳ್ಳುವಲ್ಲಿ ಯಾವುದೇ ರಾಜೀ ಇಲ್ಲ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಗುಣಹರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News