ಮನಪಾ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಿಕ್‌ಬ್ಯಾಕ್: ಮಾಜಿ ಶಾಸಕ ಲೋಬೋ, ವಿಪಕ್ಷ ನಾಯಕ ವಿನಯರಾಜ್ ಆರೋಪ

Update: 2021-09-23 11:05 GMT

ಮಂಗಳೂರು, ಸೆ.23: ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲಿ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ಮಂಗಳೂರು ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳೂರು ಸ್ವಚ್ಛವಾಗಿರಬೇಕು ಎಂಬುದು ಸರ್ವರ ಆಸೆ ಮತ್ತು ಇಚ್ಛೆಯಾಗಿದೆ. ಆದರೆ ಸ್ವಚ್ಛತೆಗಾಗಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲಿ ಕಿಕ್‌ಬ್ಯಾಕ್ ಪಡೆಯುವುದಕ್ಕೆ ನಮ್ಮ ಸಹಮತವಿಲ್ಲ. ಇದರ ವಿರುದ್ಧ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದ್ದೇವೆ ಎಂದರು.

ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಆ್ಯಂಟನಿ ವೇಸ್ಟ್ ಪಡೆದುಕೊಂಡಿತ್ತು. ಮನಪಾ ಮತ್ತು ಆ್ಯಂಟನಿ ವೇಸ್ಟ್ ನಡುವಿನ ಕರಾರು 2022ರ ಜನವರಿಗೆ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಬಿಜೆಪಿ ನೇತೃತ್ವದ ಮನಪಾ ಆಡಳಿತವು ಪ್ರತಿಪಕ್ಷವಾದ ಕಾಂಗ್ರೆಸ್ಸನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ 52 ಕೋ.ರೂ. ಮೊತ್ತದ ಹೊಸ ಯೋಜನೆಗೆ ಅನುಮೋದನೆ ಪಡೆದುಕೊಂಡಿದೆ ಎಂದು ಎ.ಸಿ. ವಿನಯರಾಜ್ ಹೇಳಿದರು.

ಈ ಹಿಂದೆ ಮನಪಾದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಆ್ಯಂಟನಿ ವೇಸ್ಟ್ ಕಂಪೆನಿಯ ಜೊತೆ ಪಾರದರ್ಶಕವಾದ ಒಪ್ಪಂದ ಮಾಡಿಕೊಂಡಿತ್ತು. ಆದರೆ ಹಾಲಿ ಬಿಜೆಪಿ ಆಡಳಿತವು ತ್ಯಾಜ್ಯ ವಿಲೇವಾರಿಗೆ 52 ಕೋ.ರೂ.ನ ಯೋಜನೆ ರೂಪಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದರಲ್ಲಿ 38 ಕೋ.ರೂ.ವನ್ನು ತ್ಯಾಜ್ಯ ಸಾಗಾಟದ ವಾಹನ ಮತ್ತಿತರ ಪರಿಕರಗಳ ಖರೀದಿಗೆ ಮೀಸಲಿಡಲಾಗಿದೆ. ಅಲ್ಲದೆ ಪಾಲಿಕೆಯ 1,175 ಪೌರ ಕಾರ್ಮಿಕರನ್ನು ಗುತ್ತಿಗೆ ಕಂಪೆನಿಗೆ ಹಸ್ತಾಂತರಿಸಿ ಆ ಕಾರ್ಮಿಕರ ನಿರ್ವಹಣೆಯನ್ನು ಕಂಪೆನಿಗೆ ವಹಿಸಿದೆ. ಮನಪಾ ವ್ಯಾಪ್ತಿಯ ಪ್ರತಿಯೊಂದು ಮನೆಯಿಂದ ತ್ಯಾಜ್ಯ ಸಂಗ್ರಹಿಸಿ ಪಚ್ಚನಾಡಿಗೆ ಡಂಪಿಂಗ್ ಮಾಡುವ ವೆಚ್ಚವನ್ನು ಕೂಡ ಈ ಮೊತ್ತದಿಂದ ಭರಿಸಲಾಗುತ್ತದೆ. ಇನ್ನು ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಹಣ ವ್ಯಯಿಸಬೇಕಾಗುತ್ತದೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ ಎಂದು ವಿನಯರಾಜ್ ಆರೋಪಿಸಿದರು.

ಕಾರ್ಕಳ, ಉಪ್ಪಿನಂಗಡಿ, ಎಂಆರ್‌ಪಿಎಲ್, ಸಹ್ಯಾದ್ರಿ, ಕ್ಷೇಮ, ಬೈಕಂಪಾಡಿ ಕೈಗಾರಿಕಾ ವಲಯ ಸಹಿತ ಅನೇಕ ಕಡೆ ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಂಸ್ಕರಣೆಯಲ್ಲಿ ರಾಮಕೃಷ್ಣ ಮಠಕ್ಕೆ ಅನೇಕ ವರ್ಷದ ಅನುಭವವಿದೆ. ಕಳೆದ 5 ವರ್ಷಗಳಲ್ಲಿ ರಾಮಕೃಷ್ಣ ಮಠದ ಸುಮಾರು 11 ಸಾವಿರ ಕಾರ್ಯಕರ್ತರು ಮಂಗಳೂರು ಮಹಾನಗರ ಸಹಿತ ಜಿಲ್ಲೆಯ ನಾನಾ ಕಡೆ ಶ್ರಮದಾನದ ಮೂಲಕ ತ್ಯಾಜ್ಯ ಸಂಗ್ರಹಿಸಿದ್ದಾರೆ. ರಾಮಕೃಷ್ಣ ಮಠದವರು ಪಾಲಿಕೆಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಆಸಕ್ತಿ ವಹಿಸಿ ಮನವಿ ಸಲ್ಲಿಸಿದ್ದರೂ ಬಿಜೆಪಿಯ ಮಂಗಳೂರು ಮನಪಾ ಆಡಳಿತವು ಮಠಕ್ಕೆ ಆ ಜವಾಬ್ದಾರಿ ವಹಿಸದೆ ಬೇರೆ ಕಂಪೆನಿಗೆ ಕೊಡಲು ಮುಂದೆ ಬಂದಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಮತ್ತು ಮೇಯರ್ ನಗರದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ವಿನಯರಾಜ್ ಒತ್ತಾಯಿಸಿದರು.

ರಾಮಕೃಷ್ಣ ಆಶ್ರಮದ ಸ್ಟಾರ್ಟ್ ಅಪ್ ಸಂಸ್ಥೆ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಈಗಿನ ಗುತ್ತಿಗೆ ಸಂಸ್ಥೆಗೆ ನೀಡುವಷ್ಟನ್ನೇ ಮೊತ್ತ ಕೊಟ್ಟರೆ ಸಾಕು. ವಾಹನ- ಸಿಬ್ಬಂದಿ ಖರೀದಿಸಿ ಕೊಡಬೇಕಿಲ್ಲ. ಕೇವಲ 5 ವರ್ಷಗಳಲ್ಲಿ ಕಸ ವಿಲೇವಾರಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿ ಪಾಲಿಕೆಗೆ ಒಪ್ಪಿಸುವುದಾಗಿ ಹೇಳಿದೆ. ಆದರೆ ಬಿಜೆಪಿ ಆಡಳಿತವು ರಾಮಕೃಷ್ಣ ಆಶ್ರಮದಿಂದ ಈ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನೂ ಪಡೆಯದೆ ನಿರ್ಲಕ್ಷ್ಯ ಮಾಡಿದೆ ಎಂದು ವಿನಯರಾಜ್ ದೂರಿದರು.

ರಾಮಕೃಷ್ಣ ಮಠದವರು ಕನಿಷ್ಠ ಒಂದು ವಾರ್ಡ್‌ನ ಜವಾಬ್ದಾರಿ ಕೊಡಿ. ಉಚಿತ ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಂಸ್ಕರಣೆ ಮಾಡಿಕೊಡುವೆವು ಎಂದು ಮನವಿ ಮಾಡಿಕೊಂಡಿದ್ದರೂ ಬಿಜೆಪಿ ಆಡಳಿತವು ಆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. 52 ಕೋ,ರೂ,ವನ್ನು ಕಂಪೆನಿಗೆ ಒಪ್ಪಿಸುವ ಮೂಲಕ ಕಿಕ್‌ಬ್ಯಾಕ್ ಪಡೆಯಲು ಮುಂದಾಗಿದೆ. ಇದನ್ನು ಕಂಡು ಸುಮ್ಮನಿರಲು ಸಾಧ್ಯವಿಲ್ಲ. ಇದು ಅನ್ಯಾಯ, ಅಕ್ರಮ, ಭ್ರಷ್ಟಾಚಾರವಾಗಿದೆ. ಜನರಿಗೆ ಹೊರೆಯೂ ಆಗಿದೆ. ಇದರ ವಿರುದ್ದ ತನಿಖೆಯಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಪ್ರವೀಣ್‌ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ ಲತೀಫ್ ಕಂದಕ್, ಕೇಶವ, ಮನಪಾ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಪ್ರಕಾಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News