ಮೈಸೂರು ಮೂಲದ ಯುವತಿಯ ಅತ್ಯಾಚಾರ, ಸುಲಿಗೆ ಆರೋಪ: ಬೆಂಗಳೂರಿನಲ್ಲಿ ಮುಡಿಪು ಮೂಲದ ಯುವಕನ ಬಂಧನ

Update: 2021-09-23 13:06 GMT
ಆರೋಪಿ ಮುಹಮ್ಮದ್ ಅಜ್ವಾನ್

ಮಂಗಳೂರು, ಸೆ.23: ಮೈಸೂರು ಮೂಲದ ಯುವತಿಯ ಮೇಲೆ ಅತ್ಯಾಚಾರ, ಸುಮಾರು 35 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಮುಡಿಪು ಮೂಲದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮುಹಮ್ಮದ್ ಅಜ್ವಾನ್ (32) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ದೊಡ್ಡಸಂದ್ರದಲ್ಲಿ ಈತನನ್ನು ಇಂದು ಮಧ್ಯಾಹ್ನದ ವೇಳೆಗೆ ಮಂಗಳೂರು ಪೊಲೀಸರ ತಂಡ ಬಂಧಿಸಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ಯುವತಿಯ ಮೇಲೆ ಅತ್ಯಾಚಾರ, ಸುಲಿಗೆ ಪ್ರಕರಣ ದಾಖಲಾಗಿತ್ತು.

ಮೈಸೂರಿನಲ್ಲಿ 2019ರಲ್ಲಿ ಅಜ್ವಾನ್ ಜತೆ ತಾನು ಸಂರ್ಪಕದಲ್ಲಿದ್ದುದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಮೊಬೈಲ್ ರಿಚಾರ್ಜಿಂಗ್ ಶಾಪ್‌ನಲ್ಲಿ ಕೆಲಸಕ್ಕಿದ್ದ ಅಜ್ವಾನ್ ತನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ತಿಳಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮುಡಿಪು ಮೂಲದ ಯುವಕನಿಂದ ದೌರ್ಜನ್ಯಕ್ಕೊಳಗಾದ ಯುವತಿ ಸೆ. 21ರಂದು ಮಧ್ಯಾಹ್ನ ಯುವಕನ ಮನೆಗೆ ತೆರಳಿದ್ದರು. ಆ ಸಂದರ್ಭ ಆತನ ತಂದೆ, ತಾಯಿ ಅಜ್ಜಿ ಹಾಗೂ ಇಬ್ಬರು ಸಹೋದರಿಯರು ಮನೆಯಲ್ಲಿದ್ದರು. ಆತನನ್ನು ಮನೆಗೆ ಕರೆಸುವವರೆಗೆ ತಾನು ಇಲ್ಲಿಂದ ಹೋಗುವುದಿಲ್ಲ ಎಂದಾಗ ಮನೆಯವರಲ್ಲಿ ಒಬ್ಬರು ಆಕೆಯ ಕಪಾಳಕ್ಕೆ ಬಾರಿಸಿ ಕಳುಹಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಮನೆಯಿಂದ ಹೊರಟ ಆಕೆ ದು:ಖದಿಂದ ಬಸ್ಸು ನಿಲ್ದಾಣದಲ್ಲಿದ್ದಾಗ ಅಲ್ಲಿದ್ದ ಸಾರ್ವಜನಿಕರು 112ಗೆ ಕರೆ ಮಾಡಿದ್ದಾಗ ಕೊಣಾಜೆ ಠಾಣೆಯಿಂದ ಪೊಲೀಸರು ವಾಹನದ ಮೂಲಕ ಆಕೆಯನ್ನು ಸಂಪರ್ಕಿಸಿ ಠಾಣೆಗೆ ಕರೆತಂದು ಸಾಂತ್ವಾನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಆಕೆ ತನ್ನ ವಕೀಲರನ್ನು ಸಂಪರ್ಕಿಸಿ ತಾನು ಮೈಸೂರಿನಲ್ಲಿಯೇ ಪ್ರಕರಣ ದಾಖಲಿಸುವುದಾಗಿ ಹೇಳಿದ ಕಾರಣ ಆಕೆಯನ್ನು ಪೊಲೀಸ್ ವಾಹನದಲ್ಲಿಯೇ ಮಂಗಳೂರು ಬಸ್ಸುನಿಲ್ದಾಣಕ್ಕೆ ಕರೆತಂದು ಬಸ್ಸಿನ ಮೂಲಕ ಸುರಕ್ಷಿತವಾಗಿ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಮತ್ತೆ ವಕೀಲರ ಸಲಹೆಯ ಮೇರೆಗೆ ಆಕೆ ಇಲ್ಲಿಯೇ ಪ್ರಕರಣ ದಾಖಲಿಸಲು ನಿರ್ಧರಿಸಿದ ಕಾರಣ ಮಹಿಳಾ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

2019ರಿಂದ ಯುವತಿ ಜತೆ ಸಂಪರ್ಕ ಹೊಂದಿದ್ದ ಆರೋಪಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ್ದಾನೆ. ಮಾತ್ರವಲ್ಲದೆ ತನ್ನಿಂದ ಹುಣಸೂರು, ಮೈಸೂರಿನಲ್ಲಿ ಕೆಫೆ ಮಾಡುವುದಾಗಿ ಹೇಳಿ 35 ಲಕ್ಷ ರೂ.ಗಳನ್ನು ಪಡೆದಿದ್ದಾನೆ. ಆದರೆ ಆತನಿಗೆ ಈಗಾಗಲೇ ಮದುವೆಯಾಗಿರುವ ವಿಷಯ ತಿಳಿದು ಆತನ ಜತೆ ವಿಚಾರಿಸಿದಾಗ ತನ್ನ ಪತ್ನಿಗೆ ವಿಚ್ಚೇದನ ನೀಡಿ ತನ್ನನ್ನೇ ಮದುವೆಯಾಗುವುದಾಗಿ ಆತ ಹೇಳಿಕೊಂಡಿದ್ದ. ಬಳಿಕ ಮದುವೆಯೂ ಆಗದೆ, ಹಣವನ್ನೂ ವಾಪಾಸು ನೀಡದೆ ವಂಚಿಸಿರುವುದಾಗಿ ಯುವತಿ ಬಳಿ ಮಾತನಾಡಿದ ಸಂದರ್ಭ ಆಕೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಆರಂಭದಲ್ಲಿ ದೂರು ದಾಖಲಿಸಲು ನಿರಾಕರಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯುವತಿಯಲ್ಲಿಯೇ ಆರೋಪ ಮಾಡಿದವರು ವಿಚಾರಿಸಬಹುದು. ಪೊಲೀಸ್ ಠಾಣೆಯಲ್ಲಿ ಆಕೆಯ ನಿರ್ಧಾರದಂತೆ ಆರಂಭದಲ್ಲಿ ಮೈಸೂರಿಗೆ ಹಿಂತಿರುಗಿ ಅಲ್ಲಿನ ಠಾಣೆಯಲ್ಲಿ ದೂರು ನೀಡುವಂತೆ ಆಕೆಗೆ ಎಲ್ಲಾ ರೀತಿಯ ಸಹಕಾರವನ್ನು ಸ್ಥಳೀಯ ಪೊಲೀಸರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 384 ಮತ್ತು 323ರಡಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News