​ಮಲ್ಪೆ: ಗುರುವಾರವೂ ಸಮುದ್ರ ಪಾಲಾಗುತ್ತಿದ್ದ ನಾಲ್ವರ ರಕ್ಷಣೆ

Update: 2021-09-23 14:59 GMT

ಮಲ್ಪೆ, ಸೆ.22: ಕೋವಿಡ್ ಲಾಕ್‌ಡೌನ್ ಬಳಿಕ ರಾಜ್ಯದ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ತೆರೆದುಕೊಳ್ಳುತಿದ್ದಂತೆ ಧಾವಿಸಿ ಬರುತ್ತಿರುವ ಪ್ರವಾಸಿಗರು ಜೀವರಕ್ಷಕ ದಳದವರ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸಿ ಪ್ರಕ್ಷುಬ್ದವಾಗಿರುವ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕುವ ಸನ್ನಿವೇಶಗಳು ಹೆಚ್ಚುತಿದ್ದು ಇಂದೂ ಸಹ ಮಲ್ಪೆ ಬೀಚ್‌ನಲ್ಲಿ ನೀರು ಪಾಲಾಗುತಿದ್ದ ನಾಲ್ವರು ಪ್ರವಾಸಿಗರನ್ನು ಮಲ್ಪೆ ಬೀಚ್ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ವರದಿಯಾಗಿದೆ.

ಭಾರೀ ತೆರೆಗಳು ಏಳುತಿದ್ದ ಅರಬಿಸಮುದ್ರದ ನೀರಿನಲ್ಲಿ ಆಡುತ್ತಿದ್ದ ವೇಳೆ ನೀರು ಪಾಲಾಗುತಿದ್ದ ಗದಗದ ಮೂವರು ಹಾಗೂ ಮಂಡ್ಯದ ಒಬ್ಬ ಪ್ರವಾಸಿಗರನ್ನು ಮಲ್ಪೆ ಬೀಚ್ ಜೀವರಕ್ಷಕ ದಳ ಇಂದು ರಕ್ಷಿಸಿದೆ.

ಬುಧವಾರ ಅಪರಾಹ್ನ ಸಹ ಇದೇ ರೀತಿ ಮಲ್ಪೆ ಕಡಲ ಕಿನಾರೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಶಿವಮೊಗ್ಗ ಮೂಲದ ಮೂವರು ವಿದ್ಯಾರ್ಥಿಗಳನ್ನು ಮಲ್ಪೆ ಬೀಚ್ ಜೀವರಕ್ಷಕ ದಳ ರಕ್ಷಿಸಿತ್ತು.

ಗುಲ್ಬರ್ಗ ರಾಮ ಮಂದಿರದ ಮೂವರು ಪ್ರವಾಸಿಗರಾದ ಅನಿಲ್‌ಕುಮಾರ್ (21), ಅಬ್ಬಾಸ್ ಅಲಿ (19) ಹಾಗೂ ಅನಿಲ್‌ಕುಮಾರ್ (21) ಅವರು ಮಲ್ಪೆ ಬೀಚ್‌ಗೆ ಬಂದು ನೀರಿನಲ್ಲಿ ಆಡಲು ಸಮುದ್ರಕ್ಕಿಳಿದು ನೀರಿನ ರಭಸಕ್ಕೆ ಸಮುದ್ರದತ್ತ ಸೆಳೆಯಲ್ಪಟ್ಟಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜೀವರಕ್ಷಕ ದಳದವರು ಮೂವರನ್ನು ರಕ್ಷಿಸಿ ದಡಕ್ಕೆ ಕರೆತಂದರು.

ಅಪರಾಹ್ನ 3:00ಗಂಟೆ ಸುಮಾರಿಗೆ ನಡೆದ ಇನ್ನೊಂದು ಘಟನೆಯಲ್ಲಿ ಮಂಡ್ಯ ಜಿಲ್ಲೆ ನೇರಕೆರೆ ಗ್ರಾಮದ ನಿತಿನ್ (18) ಎಂಬ ಯುವಕ ಸಹ ತೆರೆ ಆರ್ಭಟಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆತನನ್ನೂ ಜೀವರಕ್ಷಕ ತಂಡ ರಕ್ಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News