17ನೇ ಕಾರಂತ ಹುಟ್ಟೂರ ಪ್ರಶಸ್ತಿಗೆ ತೂಗುಸೇತುವೆಗಳ ಹರಿಕಾರ ಗಿರೀಶ್ ಭಾರದ್ವಾಜ್ ಆಯ್ಕೆ

Update: 2021-09-23 13:54 GMT

ಉಡುಪಿ, ಸೆ.23: ಕೋಟತಟ್ಟು ಗ್ರಾಪಂ ಪಂಚಾಯತ್ ಕೋಟ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ 17ನೇ ವರ್ಷದ 2021ನೇ ಸಾಲಿನ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ತೂಗುಸೇತುವೆಗಳ ಹರಿಕಾರ ಸುಳ್ಯದ ಗಿರೀಶ್ ಭಾರದ್ವಾಜ್‌ರನ್ನು ಆಯ್ಕೆ ಮಾಡಲಾಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕಾರಂತದ ವಿವಿಧ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಕಳೆದ 16 ವರ್ಷಗಳಿಂದ ನೀಡಲಾಗುತ್ತಿರುವ ಪ್ರಶಸ್ತಿಗೆ ಈ ಬಾರಿ ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಸಾಧನೆ ಮಾಡಿರುವ ದೇಶಾದ್ಯಂತ ಈಗಾಗಲೇ 140ಕ್ಕೂ ಅಧಿಕ ಪರಿಸರ ಸ್ನೇಹಿ ತೂಗುಸೇತುವೆಗಳನ್ನು ನಿರ್ಮಿಸಿರುವ ಗಿರೀಶ್ ಭಾರದ್ವಾಜ್‌ರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಕುಂದಾಪುರದ ಯು.ಎಸ್.ಶೆಣೈ ಅವರು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ಅಕ್ಟೋಬರ್ 10ರಂದು ಡಾ.ಶಿವರಾಮ ಕಾರಂತರ ಹುಟ್ಟುಹಬ್ಬದ ದಿನದಂದು ಕೋಟತಟ್ಟುನಲ್ಲಿರುವ ಕಾರಂತ ಥೀಂ ಪಾರ್ಕ್‌ನಲ್ಲಿ ಅಪರಾಹ್ನ 3:00ಗಂಟೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಕಾರಂತ ಬಹುಮುಖ ಪ್ರತಿಭೆಯನ್ನು ತೋರುವ ಕೆ.ಕೆ.ಹೆಬ್ಬಾರರ ರೇಖಾಚಿತ್ರದ ಬೆಳ್ಳಿಯ ಪ್ರತಿಕೃತಿಯ ಸ್ಮರಣಿಕೆಯನ್ನು ಒಳಗೊಂಡಿದೆ ಎಂದವರು ನುಡಿದರು.

ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಗಿರೀಶ್ ಭಾರದ್ವಾಜ್, ‘ಸೇತುಬಂಧು’ ಎಂದೇ ಖ್ಯಾತರಾಗಿದ್ದು, ಈಗಲೂ ಸಂಪರ್ಕ ವ್ಯವಸ್ಥೆ ಸಾಧ್ಯವಾಗದ ಗ್ರಾಮೀಣ ಪ್ರದೇಶದ ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡುವಂತೆ ಈವರೆಗೆ 140ಕ್ಕೂ ಅಧಿಕ ತೂಗುಸೇತುವೆಗಳನ್ನು ನಿರ್ಮಿಸಿದ್ದು, ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ಗಿರೀಶ್‌ರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಈಗಾಗಲೇ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರತಿಷ್ಠಿತ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಕರ್ನಾಟಕದ ಲೋಕಾಯುಕ್ತರಾಗಿದ್ದ ವೆಂಕಟಾಚಲ, ಶಿಕ್ಷಣ ತಜ್ಞ ಕೆ.ಆರ್.ಹಂದೆ, ಅಲ್ಲದೇ ವಿವಿಧ ಕ್ಷೇತ್ರಗಳ ಸಾಧಕರಾದ ಗಿರೀಶ್ ಕಾಸರವಳ್ಳಿ, ಜಯಶ್ರೀ, ರವಿ ಬೆಳೆಗೆರೆ, ಪ್ರಕಾಶ್ ರೈ, ಜಯಂತ ಕಾಯ್ಕಿಣಿ, ಮೋಹನ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸದಾನಂದ ಸುವರ್ಣ, ಶ್ರೀಪಡ್ರೆ, ಕವಿತಾ ಮಿಶ್ರಾ, ಡಾ.ಬಿ.ಎಂ.ಹೆಗ್ಡೆ ಹಾಗೂ ಡಾ.ಎಸ್.ಎಲ್.ಬೈರಪ್ಪ ಅವರಿಗೆ ನೀಡಿ ಗೌರವಿಸಲಾಗಿದೆ ಎಂದು ಶೆಣೈ ವಿವರಿಸಿದರು.

ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಪ್ರತಿವರ್ಷ ಹತ್ತು ದಿನಗಳ ಕಾಲ ನಡೆಯುವ ವಿಶೇಷ ಕಾರ್ಯಕ್ರಮಗಳು ಈ ಬಾರಿ ಅ.1ರಿಂದ 10ರವರೆಗೆ ನಡೆಯಲಿದೆ. ಮೊದಲ 9 ದಿನಗಳ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗುವುದು. ಕಾರಂತ ಚಿಂತನ, ನೃತ್ಯ ಪ್ರದರ್ಶನ, ಸಂಗೀತ ಸುಧೆ, ಯಕ್ಷ-ನಾಟ್ಯ-ವೈಭವ ಮುಂತಾದ ಕಾರ್ಯಕ್ರಮಗಳು ಕಾರಂತ ಥೀಮ್ ಪಾರ್ಕ್ ಯೂಟ್ಯೂಬ್ ಹಾಗೂ ಪೇಸ್‌ಬುಕ್ ಪೇಜ್ ಮೂಲಕ ನೇರ ಪ್ರಸಾರಗೊಳ್ಳಲಿದೆ.

ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಪ್ರತಿವರ್ಷ ಹತ್ತು ದಿನಗಳ ಕಾಲ ನಡೆಯುವ ವಿಶೇಷ ಕಾರ್ಯಕ್ರಮಗಳು ಈ ಬಾರಿ ಅ.1ರಿಂದ 10ರವರೆಗೆ ನಡೆಯಲಿದೆ. ಮೊದಲ 9 ದಿನಗಳ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗುವುದು. ಕಾರಂತ ಚಿಂತನ, ನೃತ್ಯ ಪ್ರದರ್ಶನ, ಸಂಗೀತ ಸುಧೆ,ಯಕ್ಷ-ನಾಟ್ಯ-ವೈಭವ ಮುಂತಾದ ಕಾರ್ಯಕ್ರಮಗಳು ಕಾರಂತ ಥೀಮ್ ಪಾರ್ಕ್ ಯೂಟ್ಯೂಬ್ ಹಾಗೂ ಪೇಸ್‌ಬುಕ್ ಪೇಜ್ ಮೂಲಕ ನೇರ ಪ್ರಸಾರಗೊಳ್ಳಲಿದೆ. ಅ.10ರ ಪ್ರಶಸ್ತಿ ಪ್ರದಾನ ಸಮಾರಂಭ ಮಾತ್ರ ಸಚಿವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಅಪರಾಹ್ನ 3:00ರಿಂದ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಯು.ಎಸ್.ಶೆಣೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂನ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿಡಿಓ ಶೈಲಾ ಎಸ್.ಪೂಜಾರಿ ಹಾಗೂ ಕಾರಂತ ಥೀಮ್ ಪಾರ್ಕ್‌ನ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

ಗಿರೀಶ್ ಭಾರದ್ವಾಜ್ ಪರಿಚಯ
ಸುಳ್ಯ ತಾಲೂಕು ಗಾಂಧಿನಗರದವರಾದ 71 ವರ್ಷ ಪ್ರಾಯದ ಗಿರೀಶ್ ಭಾರದ್ವಾಜ್ ಮಂಡ್ಯದ ಪಿಇಎಸ್ ಕಾಲೇಜಿನಿಂದ 1973ರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ಪದವಿಯ ಬಳಿಕ ಅವರು ಕೈಗೊಂಡಿದ್ದು, ಹಳ್ಳಿ-ಹಳ್ಳಿಗಳು ಹಾಗೂ ಜನರ ನಡುವೆ ಸೇತುವೆ ಕಟ್ಟುವ ಕಾಯಕವನ್ನು.

ಕರಾವಳಿ ಮತ್ತು ಮಲೆನಾಡುಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕವೇ ಇಲ್ಲವಾಗುವ ಹಳ್ಳಿಗಳಿಗೆ ತೂಗುಸೇತುವೆ ಮೂಲಕ ಸಂಪರ್ಕ ಕಲ್ಪಿಸುವ ಅವರ ಯೋಜನೆ ಇಂದು ಅಭಿಯಾನದ ರೂಪ ಪಡೆದಿದೆ. ತಮ್ಮೂರಿನ ಪಯಸ್ವಿನಿ, ನೇತ್ರಾವತಿಯಿಂದ ಪ್ರಾರಂಭಿಸಿ ತುಂಗಾ, ಭದ್ರಾ, ಕಾವೇರಿ, ಶರಾವತಿ, ಸೀತಾನದಿ, ಸ್ವರ್ಣ ಸೇರಿದಂತೆ ರಾಜ್ಯದ ಹೆಚ್ಚಿನೆಲ್ಲಾ ನದಿಗಳಿಗೆ ತೂಗುಸೇತುವೆ ನಿರ್ಮಿಸಿದ್ದಾರೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ, ಆಂಧ್ರಪ್ರದೇಶ, ಕೇರಳ ಹಾಗೂ ಒರಿಸ್ಸಾ ರಾಜ್ಯಗಳಿಂದಲೂ ಬಂದ ಬೇಡಿಕೆಯಂತೆ ಅಲ್ಲೂ ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ. ಇದೀಗ ಶ್ರೀಲಂಕಾ ಸೇರಿದಂತೆ ಅನ್ಯ ದೇಶಗಳಿಂದಲೂ ಇಂಥ ಸೇತುವೆಗಳ ನಿರ್ಮಾಣಕ್ಕೆ ಬೇಡಿಕೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News