​ಉದ್ಯಾವರದಲ್ಲಿ ಹೊಸ ವೀರಗಲ್ಲು ಪತ್ತೆ

Update: 2021-09-23 14:19 GMT

ಉಡುಪಿ, ಸೆ.23: ನಗರದ ಭಾಗವಾಗಿರುವ ಉದ್ಯವರದಲ್ಲಿ ಅತ್ಯಾಕರ್ಷಕ ದ್ವಂದ ಯುದ್ಧ ಶೈಲಿಯ ವೀರಗಲ್ಲು ಪತ್ತೆಯಾಗಿದೆ ಎಂದು ಶಿರ್ವದ ಎಂ. ಎಸ್. ಆರ್.ಎಸ್. ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಸ್ ಮತ್ತು ಗೌತಮ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವೀರಗಲ್ಲು ಉದ್ಯಾವರದ ಗಣಪತಿ ದೇವಾಲಯದ ಸಮೀಪದ ರಸ್ತೆ ಬದಿಯ ಪೊದೆಯಲ್ಲಿ ಹುದುಗಿ ಹೋಗಿದ್ದನ್ನು ಅವರು ಪತ್ತೆ ಹಚ್ಚಿದ್ದಾರೆ.

ಉದ್ಯಾವರ, ತುಳುನಾಡನ್ನು ಆಳಿದ ಆಳುಪರ ಪ್ರಾಚೀನ ರಾಜಧಾನಿಗಳಲ್ಲಿ ಒಂದಾಗಿತ್ತು. ಅಲ್ಲಿನ ಅನೇಕ ಪ್ರಾಚೀನ ಶಾಸನಗಳು, ದೇವಾಲಯಗಳು ಇಂದಿಗೂ ಉದ್ಯಾರದ ಗತ ವೈಭವಕ್ಕೆ ಸಾಕ್ಷಿಯಾಗಿವೆ.

ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟ ವೀರಗಲ್ಲು ಸುಮಾರು 3 ಅಡಿ ಎತ್ತರವಾಗಿದೆ. ಆಯತಾಕಾರದ ಈ ವೀರಗಲ್ಲನ್ನು ಎರಡು ಪಟ್ಟಿಕೆಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಕೆಳಗಿನ ಪಟ್ಟಿಕೆಯಲ್ಲಿ ಅತ್ಯಾಕರ್ಷಕ ಭಂಗಿಯಲ್ಲಿ ದ್ವಂದ ಯುದ್ಧ ನಿರತ ಇಬ್ಬರು ವೀರರ ಉಬ್ಬು ಶಿಲ್ಪಗಳಿವೆ. ಮೇಲಿನ ಪಟ್ಟಿಕೆಯಲ್ಲಿ ಹೋರಾಟದಲ್ಲಿ ಸಾವನ್ನಪ್ಪಿದ ವೀರ ಸ್ವಗದರ್ಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ.

ಶಿಲ್ಪದ ಶೈಲಿ ಮತ್ತು ವಿನ್ಯಾಸದ ಆಧಾರದ ಮೇಲೆ ಇದು ಸುಮಾರು 10ನೇ ಶತಮಾನದ ವೀರಗಲ್ಲೆಂದು ಪುರಾತತ್ವ ಇತಿಹಾಸಕಾರ ಪ್ರೊ.ಟಿ. ಮುರುಗೇಶಿ ಅಭಿಪ್ರಾಯ ಪಟ್ಟಿದ್ದಾರೆ. ಅವರ ಪ್ರಕಾರ ಈ ದ್ವಂದಯುದ್ಧದಲ್ಲಿ ಹೋರಾಡುತ್ತಿರುವ ವೀರರು ಕೈಗಳಲ್ಲಿ ಹಿಡಿದಿರುವ ಖಡ್ಗಗಳು, ನಾಗಮುರಿ ಎಂಬ ವಿಶಿಷ್ಟ ಆಯುಧಗಳಾಗಿವೆ ಎಂದು ತಿಳಿಸಿದ್ದಾರೆ.

ಈ ಪುರಾತತ್ವ ಅನ್ವೇಷಣೆಗೆ ಮಾರ್ಗದರ್ಶನ ಮಾಡಿ, ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಿ ಪ್ರೋತ್ಸಾಹಿಸಿದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಟಿ. ಮುರುಗೇಶಿ ಅವರಿಗೆ ಸದಾ ಋಣಿಗಳಾಗಿದ್ದೇವೆ ಎಂದು ಶ್ರೇುಸ್ ಮತ್ತು ಗೌತಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News