ಕುಂದಾಪುರ: ಬ್ಯಾರೀಸ್ ವಿದ್ಯಾಸಂಸ್ಥೆ ವತಿಯಿಂದ ವಿಶ್ವ ಹಸಿರು ಕಟ್ಟಡಗಳ ಸಪ್ತಾಹ

Update: 2021-09-23 15:48 GMT

ಕುಂದಾಪುರ: ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ‘ಸ್ವಚ್ಛ ಕಡಲ ತೀರ, ಹಸಿರು ಕೋಡಿ’ ದ್ಯೇಯ ವಾಕ್ಯದೊಂದಿಗೆ ವಿಶ್ವ ಹಸಿರು ಕಟ್ಟಡ ಸಪ್ತಾಹಕ್ಕೆ ಸೆ.26ರ ರವಿವಾರ ಬೆಳಗ್ಗೆ 7:00ಕ್ಕೆ ಚಾಲನೆ ನೀಡಲಾಗುವುದು ಎಂದು ಬ್ಯಾರೀಸ್ ಸಮೂಹ ಸಂಸ್ಥೆಗಳ ನಿರ್ದೇಶಕ ದೋಮ ಚಂದ್ರಶೇಖರ ಅವರು ತಿಳಿಸಿದ್ದಾರೆ.

ಕುಂದಾಪುರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಸಿರು ಕಟ್ಟಡ ಕೌನ್ಸಿಲ್‌ನಲ್ಲಿ 70 ರಾಷ್ಟ್ರಗಳು ಮಾನ್ಯತೆ ಪಡೆದಿದೆ. ಇದರಲ್ಲಿ ಭಾರತವೂ ಒಂದು. ವಿಶ್ವದಲ್ಲಿ ಭಾರತ ಹಸಿರು ಕಟ್ಟಡ ಮೂರನೇ ಸ್ಥಾನದಲ್ಲಿದೆ. ಸುಮಾರು 7.86 ಬಿಲಿಯನ್ ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹಸಿರು ಕಟ್ಟಡ ಈಗಾಗಲೇ ಆವರಿಸಿಕೊಂಡಿದೆ. ಅದನ್ನು 10 ಸಾವಿರ ಬಿಲಿಯನ್ ಚದರ ಅಡಿಗೆ ಏರಿಸುವ ಗುರಿಯನ್ನು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಹೊಂದಿದೆ ಎಂದರು.

ಇದರಿಂದ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ವಿಶ್ವ ಹಸಿರು ಕಟ್ಟಡ ಕೌನ್ಸಿಲ್‌ನಲ್ಲಿ ಪ್ರಥಮ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ ಎಂದು ಬ್ಯಾರೀಸ್ ಗ್ರೂಪಿನ ಅಧ್ಯಕ್ಷ ಮತ್ತು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಬೆಂಗಳೂರು ಚಾಪ್ಟರಿನ ಅಧ್ಯಕ್ಷರಾದ ಸೈಯದ್ ಮಹಮ್ಮದ್ ಬ್ಯಾರಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ದೋಮ ಚಂದ್ರಶೇಖರ್ ನುಡಿದರು.

ಸೈಯದ್ ಮಹಮ್ಮದ್ ಬ್ಯಾರಿ ಅವರು ಕುಂದಾಪುರದ ಕೋಡಿಯವರಾ ದ್ದರಿಂದ, ತನ್ನ ಹುಟ್ಟೂರಾದ ಕೋಡಿಯನ್ನು ಪರಿಸರ ಸ್ನೇಹಿ ಗ್ರಾಮವನ್ನಾಗಿ ರೂಪಿಸಿ, ಹಸಿರು ಕೋಡಿಯಾಗಿ ನಿರ್ಮಿಸಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.

ಈ ತಿಂಗಳ ಕೊನೆಯ ವಾರದಲ್ಲಿ ಎಲ್ಲಾ ಗ್ರೀನ್ ಬಿಲ್ಡಿಂಗ್ ಸಂಸ್ಥೆಗಳು ವಿಶ್ವದಾದ್ಯಂತ ಸಪ್ತಾಹವನ್ನು ಆಚರಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಇದೇ ಸಂದರ್ಭದಲ್ಲಿ ಕೋಡಿಯನ್ನು ಹಸಿರನ್ನಾಗಿಸುವ ಯೋಜನೆಯನ್ನು ಒಂದು ಅಭಿಯಾನದ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಅವರ ಉದ್ದೇಶ ಕೋಡಿಯನ್ನು ಹಸಿರು ಕೋಡಿಯನ್ನಾಗಿಸಿ ವಿಶ್ವದ ನಕ್ಷೆಯಲ್ಲಿ ಕಾಣುವಂತೆ ಮಾಡಬೇಕೆನ್ನುವುದಾಗಿದೆ ಎಂದರು.

ವಿಶ್ವವೇ ಕೋಡಿಯನ್ನು ಗುರುತಿಸುವಂತಾಗಬೇಕು. ಇದರಿಂದ ವಿಶ್ವದ ಜನರು ಆಕರ್ಷಿತರಾಗಿ ಕೋಡಿಗೆ ಬರುವಂತಾಗಬೇಕು. ಕೋಡಿ ಒಂದು ಪ್ರೇಕ್ಷಣೀಯ ಸ್ಥಳವಾಗಿ ವಿಶ್ವದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಮಹದಾಸೆ ಸೈಯದ್ ಮಹಮ್ಮದ್ ಬ್ಯಾರಿ ಅವರದ್ದಾಗಿದೆ ಎಂದು ದೋಮ ಚಂದ್ರಶೇಖರ್ ತಿಳಿಸಿದರು.

ಈ ಹಿನ್ನಲೆಯಲ್ಲಿ ಸೆ.26ರ ರವಿವಾರ ಬೆಳಗ್ಗೆ 7ಕ್ಕೆ ಕೋಡಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ವಿಶ್ವ ಹಸಿರು ಕಟ್ಟಡ ಸಪ್ತಾಹಕ್ಕೆ ಚಾಲನೆಯನ್ನು ನೀಡಲು ಉದ್ದೇಶಿಸಲಾಗಿದೆ. ಸಪ್ತಾಹಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಮತ್ತು ಕೋಡಿ ಕಡಲ ತೀರ ಸ್ವಚ್ಛತೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಸಯ್ಯದ್ ಮೊಹಮದ್ ಬ್ಯಾರಿ ಅವರು ಮನವಿ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಸಿದ್ದಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News