ವಿಶಾಲ ಗಾಣಿಗ ಕೊಲೆ ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ವಿತರಣೆ

Update: 2021-09-23 15:52 GMT

ಉಡುಪಿ, ಸೆ.23: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸ್ ತನಿಖಾ ತಂಡದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇಂದು ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು.

ಅತ್ಯಂತ ಜಟಿಲವಾದ ಯಾವುದೇ ಪುರಾವೆ, ಕುರುಹು ಇಲ್ಲದ ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ಬೇಧಿಸಿದ ಪೊಲೀಸ್ ತನಿಖಾ ತಂಡಕ್ಕೆ ರಾಜ್ಯ ಡಿಜಿ ಹಾಗೂ ಐಜಿಪಿಯವರಾದ ಪ್ರವೀಣ್ ಸೂದ್ 50,000ರೂ.ಗಳ ನಗದು ಬಹುಮಾನ ಘೋಷಿಸಿದ್ದರು.

ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದ ಪಶ್ಚಿಮ ವಲಯದ ಐಜಿಪಿಯವರಾದ ದೇವಜ್ಯೋತಿ ರೇ ಅವರು ತಂಡದ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ ನಾಯಕ್, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಮಣಿಪಾಲ ಪಿಐ ಮಂಜುನಾಥ ಗೌಡ, ಮಲ್ಪೆ ಸಿಪಿಐ ಶರಣ್‌ಗೌಡ, ಕಾರ್ಕಳ ಸಿಪಿಐ ಸಂಪತ್ ಕುಮಾರ್, ಪಿಎಸ್‌ಐಗಳಾದ ರಾಜಶೇಖರ ವಂದಲಿ, ಗುರುನಾಥ ಹಾದಿಮನಿ, ಮಧು, ಶ್ರೀಧರ ನಾಯಕ್, ರಾಘವೇಂದ್ರ, ಸಿಡಿಆರ್ ವಿಭಾಗದ ಶಿವಾನಂದ, ದಿನೇಶ್ ನಿತಿನ್ ನಗದು ಪುರಸ್ಕಾರ ಪಡೆದರು.

ಕಳೆದ ಜು.12ರಂದು ವಿಶಾಲ ಗಾಣಿಗರನ್ನು ಬ್ರಹ್ಮಾವರ ಉಪ್ಪಿನಕೋಟೆಯ ಮಿಲನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಅವರ ಪ್ಲಾಟ್‌ನಲ್ಲಿ ಸುಫಾರಿ ಕಿಲ್ಲರ್‌ಗಳು ಹತ್ಯೆ ಮಾಡಿದ್ದರು. ಅರೋಪಿ ಚಾಕಚಕ್ಯತೆಯಿಂದ ಕೊಲೆ ನಡೆಸಿದ್ದರಿಂದ ಪ್ರಕರಣವನ್ನು ಭೇದಿಸುವುದು ಕಷ್ಟವಾಗಿದ್ದು, ಸಾರ್ವಜನಿಕ ವಲಯದಲ್ಲಿ ಸಂಚಲನ ಉಂಟಾಗಿತ್ತು.

ಆದರೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡದ ಸದಸ್ಯರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸ್ವಾಮಿನಾಥನ್ ನಿಶಾದ್‌ನನ್ನು ಬಂಧಿಸಿದ ನಂತರ ವಿಶಾಲ ಗಾಣಿಗರ ಪತಿ ರಾಮಕೃಷ್ಣ ಗಾಣಿಗನೇ ಕೊಲೆ ಮಾಡಲು ಸುಫಾರಿ ನೀಡಿರುವುದು ಬಹಿರಂಗಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News