ಯೆಮೆನ್ ನಲ್ಲಿ 1.6 ಕೋಟಿ ಜನತೆಗೆ ಆಹಾರದ ಕೊರತೆ; ವಿಶ್ವಸಂಸ್ಥೆ ವರದಿ

Update: 2021-09-23 17:53 GMT

ವಾಷಿಂಗ್ಟನ್, ಸೆ.23: ಯುದ್ಧದಿಂದ ಜರ್ಝರಿತವಾಗಿರುವ ಯೆಮನ್ನಲ್ಲಿ 1.6 ಕೋಟಿ ಜನತೆ ಆಹಾರದ ಕೊರತೆಯಿಂದ ಉಪವಾಸ ಬೀಳುವ ಪರಿಸ್ಥಿತಿಯಿದ್ದು, ಹೊಸ ದೇಣಿಗೆದಾರರ ನೆರವು ಲಭಿಸದಿದ್ದರೆ ಅಲ್ಲಿನ ಮಿಲಿಯಾಂತರ ಜನರಿಗೆ ಒದಗಿಸಲಾಗುವ ಪಡಿತರ ಆಹಾರ ಅಕ್ಟೋಬರ್ನಿಂದ ಸ್ಥಗಿತಗೊಳ್ಳಲಿದೆ ಎಂದು ವಿಶ್ವಸಂಸ್ಥೆ ಆಹಾರ ವಿಭಾಗದ ಮುಖ್ಯಸ್ಥ ಡೇವಿಡ್ ಬೀಸ್ಲೆ ಎಚ್ಚರಿಸಿದ್ದಾರೆ. 

ಯೆಮನ್ನ ಮಾನವೀಯ ಬಿಕ್ಕಟ್ಟಿನ ವಿಷಯಕ್ಕೆ ಸಂಬಂಧಿಸಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಬೀಸ್ಲೆ, ಈ ವರ್ಷದ ಆರಂಭದಲ್ಲಿ ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ)ಗೆ ಹಣದ ಕೊರತೆ ಎದುರಾಗಿದ್ದಾಗ ಅಮೆರಿಕ, ಜರ್ಮನಿ, ಯುಎಇ, ಸೌದಿ ಅರೆಬಿಯಾ ಮತ್ತಿತರ ದೇಣಿಗೆದಾರರು ಕೊಡುಗೆ ನೀಡಿದ್ದರಿಂದ ನಮಗೆ ಬರಗಾಲ ಮತ್ತಿತರ ದುರಂತವನ್ನು ತಪ್ಪಿಸಲು ಸಾಧ್ಯವಾಗಿದೆ. ಈ ದೇಣಿಗೆ ಹಣ ಕಾಲಿಯಾಗುತ್ತಿದೆ. ಹೊಸ ದೇಣಿಗೆ ಲಭಿಸದಿದ್ದರೆ ಅಕ್ಟೋಬರ್ನಲ್ಲಿ 3.2 ಮಿಲಿಯ ಜನತೆಯ ಪಡಿತರದಲ್ಲಿ ಕಡಿತ ಮತ್ತು ಡಿಸೆಂಬರ್ನಲ್ಲಿ 5 ಮಿಲಿಯನ್ ಜನತೆಯ ಪಡಿತರ ಕಡಿತ ಮಾಡಬೇಕಾಗುತ್ತದೆ ಎಂದರು. 

ವಿಶ್ವಸಂಸ್ಥೆಯ ಮಹಾ ಅಧಿವೇಶನದ ನೇಪಥ್ಯದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಸುಮಾರು 600 ಮಿಲಿಯ ಡಾಲರ್ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಇನ್ನೂ ಕನಿಷ್ಟ 1 ಬಿಲಿಯನ್ ಡಾಲರ್ ನೆರವಿನ ಕೊರತೆಯಿದೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಹೆಚ್ಚುವರಿ 290 ಮಿಲಿಯನ್ ಡಾಲರ್ ಮಾನವೀಯ ನೆರವಿನ ಭರವಸೆ ನೀಡಿದ್ದರೆ, ಯುರೋಪಿಯನ್ ಯೂನಿಯನ್ ಸುಮಾರು 139 ಮಿಲಿಯನ್ ನೆರವಿನ ಭರವಸೆ ನೀಡಿದೆ. ದೇಣಿಗೆದಾರರನ್ನು ಅಭಿನಂದಿಸಿರುವ ಆಕ್ಸಂ ಚಾರಿಟಿ(ಆಕ್ಸ್ಫರ್ಡ್ ಕಮಿಟಿ ಫಾರ್ ಫೆಮಿನ್ ರಿಲೀಫ್)ಯ ನಿರ್ದೇಶಕ ಮುಹ್ಸಿನ್ ಸಿದ್ದಿಕ್, ಈ ನೆರವು ಶೀಘ್ರ ದೊರಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

2014ರಲ್ಲಿ ಹೌದಿ ಬಂಡುಕೋರರು ಸನಾ ಪಟ್ಟಣ ಸಹಿತ ದೇಶದ ಉತ್ತರದಲ್ಲಿರುವ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಯೆಮನ್ನಲ್ಲಿ ಅಂತರ್ಯುದ್ಧ ಆರಂಭವಾಗಿತ್ತು ಮತ್ತು ಅಧ್ಯಕ್ಷ ಮನ್ಸೂರ್ ಹದಿ ಸೌದಿ ಅರೆಬಿಯಾಕ್ಕೆ ಪಲಾಯನ ಮಾಡಿದ್ದರು. ಸರಕಾರದ ಮರುಸ್ಥಾಪನೆಗಾಗಿ ಸೌದಿ ಅರೆಬಿಯಾ ನೇತೃತ್ವದ ಮತ್ತು ಅಮೆರಿಕ ಬೆಂಬಲಿತ ಮೈತ್ರಿಪಡೆಯ ಸೇನಾ ಕಾರ್ಯಾಚರಣೆ 2015ರ ಮಾರ್ಚ್ನಲ್ಲಿ ಆರಂಭವಾದಂದಿನಿಂದ ಸಂಘರ್ಷ ಮುಂದುವರಿದು ಯೆಮನ್ನಲ್ಲಿ ತೀವ್ರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. 

‘ಈ ಯುದ್ಧವನ್ನು ಅಂತ್ಯಗೊಳಿಸಬೇಕಾಗಿದೆ. ಮತ್ತು ಒಂದು ವೇಳೆ ದೇಣಿಗೆದಾರರು ಬಳಲಿದರೆ(ದೇಣಿಗೆ ನಿಲ್ಲಿಸಿದರೆ) ಯುದ್ಧ ಮುಗಿಸುವುದೇ ಒಳ್ಳೆಯದು’ ಎಂದು ಡೇವಿಡ್ ಬೀಸ್ಲೆ ಹೇಳಿದ್ದಾರೆ. ಯೆಮನ್ ಜನರ ಕಷ್ಟಗಳನ್ನು ಅಂತ್ಯಗೊಳಿಸಲು ವಿಶ್ವದ ಮುಖಂಡರು ಸಂಬಂಧಿತ ಎಲ್ಲ ಪಕ್ಷದವರ ಮೇಲೂ ಒತ್ತಡ ಹೇರಬೇಕಿದೆ. ಕರೆನ್ಸಿಯ ಅಪಮೌಲ್ಯ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನತೆ ಕಂಗಾಲಾಗಿದ್ದು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಅವರ ಬಳಿ ಏನೂ ಇಲ್ಲ. ನಿಜವಾಗಿಯೂ ಹೃದಯವಿದ್ರಾವಕ ಪರಿಸ್ಥಿತಿ ಇದು ಎಂದವರು ಹೇಳಿದ್ದಾರೆ. 

ಯೆಮನ್ನ 11.3 ಮಕ್ಕಳು ಬದುಕುಳಿಯಬೇಕಿದ್ದರೆ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ನ ಮುಖ್ಯಸ್ಥೆ ಹೆನ್ರೀಟಾ ಫ್ರೋಹೇಳಿದ್ದಾರೆ. 5 ವರ್ಷದೊಳಗಿನ 2.3 ಮಿಲಿಯನ್ ಮಕ್ಕಳು ತೀವ್ರ ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದರೆ ಇವರಲ್ಲಿ ಸುಮಾರು 4 ಲಕ್ಷ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಯಿಂದ ಸಾಯುವ ಸ್ಥಿತಿಯಲ್ಲಿದ್ದಾರೆ . ಅಪೌಷ್ಟಿಕತೆ ಮತ್ತು ಲಸಿಕೆ ಪಡೆದರೆ ತಡೆಗಟ್ಟಬಹುದಾದ ಕಾಯಿಲೆಗಳಿಂದಾಗಿ ಯೆಮನ್ನಲ್ಲಿ ಪ್ರತೀ 10 ನಿಮಿಷಕ್ಕೆ ಒಂದು ಮಗು ಸಾವನ್ನಪ್ಪುತ್ತಿದೆ ಎಂದವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News