ಸಬ್ಮೆರಿನ್ ಒಪ್ಪಂದ ವಿವಾದ ಆತ್ಮಸಂಯಮ ಇರಲಿ: ಫ್ರಾನ್ಸ್ ಗೆ ಬ್ರಿಟನ್ ಪ್ರಧಾನಿ ಸಲಹೆ

Update: 2021-09-23 18:08 GMT

ಲಂಡನ್, ಸೆ.23: ಅಮೆರಿಕ- ಆಸ್ಟ್ರೇಲಿಯಾ ನಡುವಿನ ಸಬ್ಮೆರಿನ್ ಒಪ್ಪಂದದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಫ್ರಾನ್ಸ್ ಗೆ ಸಲಹೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಆತ್ಮಸಂಯಮ ಬೆಳೆಸಿಕೊಂಡು, ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಬೈಡೆನ್ ರನ್ನು ಭೇಟಿ ಮಾಡಿದ ಬಳಿಕ ಲಂಡನ್ನಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಜಾನ್ಸನ್, ವಿಶ್ವದ ನಮ್ಮ ಕೆಲವು ಆತ್ಮೀಯ ಮಿತ್ರರು ಆತ್ಮಸಂಯಮ ಬೆಳೆಸಿಕೊಳ್ಳಬೇಕು ಮತ್ತು ಆಸ್ಟ್ರೇಲಿಯಾ ಮತ್ತು ಅಮೆರಿಕದ ಮಿತ್ರರು ತಮ್ಮ ಕೆಲಸ ಮುಂದುವರಿಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಎಂಬುದು ತನ್ನ ಆಶಯವಾಗಿದೆ ಎಂದರು. 

ಈ ಒಪ್ಪಂದ ಯಾರನ್ನೂ ದೂರವಿಡುವ ಪ್ರಯತ್ನವಲ್ಲ ಅಥವಾ ಚೀನಾದ ವಿರೋಧಿಯಲ್ಲ. ಮೂರು ದೇಶಗಳ ನಡುವಿನ ಸಂಪರ್ಕ ಮತ್ತು ಮಿತ್ರತ್ವವನ್ನು ಗಾಢವಾಗಿಸುವ ಉದ್ದೇಶದ್ದಾಗಿದೆ ಎಂದರು. ಫ್ರಾನ್ಸ್ನೊಂದಿಗಿನ ಸಬ್ಮೆರಿನ್ ಒಪ್ಪಂದವನ್ನು ಕಳೆದ ವಾರ ಏಕಾಏಕಿ ರದ್ದುಗೊಳಿಸಿದ್ದ ಆಸ್ಟ್ರೇಲಿಯಾ, ಅಮೆರಿಕದಿಂದ ಪರಮಾಣುಶಕ್ತ ಸಬ್ಮೆರಿನ್ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೆ ಪೂರಕವಾಗಿ ಬ್ರಿಟನ್- ಅಮೆರಿಕ- ಆಸ್ಟ್ರೇಲಿಯಾ ಮಧ್ಯೆ ರಕ್ಷಣಾ ಸಹಕಾರ ಒಪ್ಪಂದ ಏರ್ಪಟ್ಟಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಫ್ರಾನ್ಸ್, ಅಮೆರಿಕ ಅಧ್ಯಕ್ಷ ಬೋರಿಸ್ ಜಾನ್ಸನ್ ಬೆನ್ನಿಗೆ ಚೂರಿ ಹಾಕಿದ್ದಾರೆ ಮತ್ತು ತನ್ನ ಪೂರ್ವಾಧಿಕಾರಿ ಟ್ರಂಪ್ರಂತೆಯೇ ವರ್ತಿಸಿದ್ದಾರೆ ಎಂದು ಟೀಕಿಸಿತ್ತು. ಆ ಬಳಿಕ ಆಸ್ಟ್ರೇಲಿಯಾ ಮತ್ತು ಅಮೆರಿಕದಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿತ್ತು. ಆದರೆ ಬ್ರಿಟನ್ ವಿರುದ್ಧ ಯಾವುದೇ ಹೇಳಿಕೆ ಅಥವಾ ಕ್ರಮ ಕೈಗೊಂಡಿರಲಿಲ್ಲ. ಇದೀಗ ಜಾನ್ಸನ್ ಹೇಳಿಕೆ ಫ್ರಾನ್ಸ್ ನ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯುವ ಸಾಧ್ಯತೆಯಿದೆ. 

ತಕ್ಷಣದಿಂದ ಅನ್ವಯಿಸುವಂತೆ ಬ್ರಿಟನ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಸೀಮಿತಗೊಳಿಸುವಂತೆ ಫ್ರಾನ್ಸ್ ಸೂಚಿಸಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ‘ಗ್ಲೋಬಲ್ ಬ್ರಿಟನ್(ಜಾನ್ಸನ್ ಉಲ್ಲೇಖಿಸಿದ್ದ ಪದ) ಕಾರ್ಯಸೂಚಿಯು ಬ್ರಿಟನ್ ಅನ್ನು ಮುನ್ನೆಲೆಗೆ ತರುವ ಮತ್ತು ಯುರೋಪ್ ಅನ್ನು ಕಡೆಗಣಿಸುವ ಉದ್ದೇಶ ಹೊಂದಿರುವಂತೆ ಕಾಣುತ್ತದೆ. ನಾವದನ್ನು ಒಪ್ಪುವುದಿಲ್ಲ’ ಎಂದು ಫ್ರಾನ್ಸ್ನ ರಾಜತಾಂತ್ರಿಕ ಮೂಲವೊಂದು ಪ್ರತಿಕ್ರಿಯಿಸಿದೆ. 

ನೂತನ ಸಹಕಾರ ಒಪ್ಪಂದವನ್ನು ಕಾರ್ಯಗತಗೊಳಿಸುವಲ್ಲಿ ಬ್ರಿಟನ್ನ ಪಾತ್ರ ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಬೃಹತ್ ಆಗಿರುವಂತೆ ಕಾಣುತ್ತದೆ. ವಾಗ್ದಾನ ಮಾಡಿದ ಬಳಿಕ ಅದನ್ನು ಈಡೇರಿಸದಿರುವುದು ಸಮಸ್ಯೆಯೇ ಅಲ್ಲ ಎಂದು ಜಾನ್ಸನ್ ಭಾವಿಸಿರಬೇಕು. ಅಂತರಾಷ್ಟ್ರೀಯ ವ್ಯಾಪಾರಾದೇಶ(ಆರ್ಡರ್)ವು ವಿಶ್ವಾಸವನ್ನು ಆಧರಿಸಿದ ನಿಯಮ ಮತ್ತು ಸಂಬಂಧವನ್ನು ಆಧರಿಸಿರುತ್ತದೆ ಎಂದು ಫ್ರಾನ್ಸ್ನ ಮಾಜಿ ಸಚಿವೆ ನಥಾಲಿ ಲೂಯ್ಸಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News