‘ಔಕಸ್’ ಒಕ್ಕೂಟಕ್ಕೆ ಭಾರತ-ಜಪಾನ್ ಸೇರ್ಪಡೆಯಿಲ್ಲ: ಅಮೆರಿಕ

Update: 2021-09-23 18:10 GMT

ವಾಷಿಂಗ್ಟನ್, ಸೆ.23: ಇಂಡೊ-ಪೆಸಿಫಿಕ್ ವಲಯಕ್ಕೆ ಸಂಬಂಧಿಸಿದ ಅಮೆರಿಕ-ಬ್ರಿಟನ್-ಆಸ್ಟ್ರೇಲಿಯಾ ದೇಶಗಳ ಒಕ್ಕೂಟಕ್ಕೆ ಭಾರತ ಮತ್ತು ಜಪಾನ್ಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯನ್ನು ಅಮೆರಿಕ ತಳ್ಳಿಹಾಕಿದೆ. ಔಕಸ್ ಎಂದು ಕರೆಯಲಾಗುವ ನೂತನ ತ್ರಿಪಕ್ಷೀಯ ಭದ್ರತೆ ಒಪ್ಪಂದದ ಬಗ್ಗೆ ಸೆಪ್ಟಂಬರ್ 15ರಂದು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಘೋಷಿಸಿದ್ದವು.‌

ಈ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾವು 2016ರಲ್ಲಿ ಫ್ರಾನ್ಸ್ನೊಂದಿಗೆ ಮಾಡಿಕೊಂಡಿದ್ದ ಸಬ್ಮೆರೀನ್ ಪಡೆಯ ನಿರ್ಮಾಣ ಒಪ್ಪಂದವನ್ನು ರದ್ದುಗೊಳಿಸಿ, ಇದರ ಬದಲು ಅಮೆರಿಕ ಮತ್ತು ಬ್ರಿಟನ್ ನೆರವಿನಿಂದ 8 ಪರಮಾಣುಶಕ್ತ ಸಬ್ಮೆರಿನ್ ನಿರ್ಮಿಸುವುದಾಗಿ ಹೇಳಿತ್ತು. ಬುಧವಾರ ಶ್ವೇತಭವನದಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಔಕಸ್ ಒಕ್ಕೂಟಕ್ಕೆ ಭಾರತ-ಜಪಾನ್ ಸೇರ್ಪಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ, ಇಂಡೊ-ಪೆಸಿಫಿಕ್ ಒಕ್ಕೂಟದಲ್ಲಿ ಬೇರೆ ಯಾರನ್ನೂ ಸೇರ್ಪಡೆಗೊಳಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಫ್ರಾನ್ಸ್ನ ಅಧ್ಯಕ್ಷರಿಗೆ ರವಾನಿಸ ಬಯಸುತ್ತೇನೆ ಎಂದರು. 

ಈ ಮಧ್ಯೆ, ಒಕ್ಕೂಟದಲ್ಲಿ ತನ್ನನ್ನು ಸೇರಿಸಿಕೊಳ್ಳದ ಬಗ್ಗೆ ಫ್ರಾನ್ಸ್ ಆಕ್ರೋಶಗೊಂಡಿದ್ದು ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಅಮೆರಿಕ ಅಧ್ಯಕ್ಷ ಬೈಡೆನ್ ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಔಕಸ್ ಒಕ್ಕೂಟವು ವಿಶೇಷವಾಗಿ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯಕ್ಕೆ ಪ್ರತಿಯಾಗಿ ಕಾರ್ಯತಂತ್ರದ ಉಪಕ್ರಮವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News