×
Ad

ದ.ಕ.: ವಾರಾಂತ್ಯ ರಸ್ತೆಬದಿ ಉತ್ಸವಕ್ಕೆ ಜಿಲ್ಲಾಡಳಿತ ಯೋಜನೆ

Update: 2021-09-24 15:03 IST

ಮಂಗಳೂರು, ಸೆ.24: ಕೊರೋನ 2ನೇ ಅಲೆ ತಗ್ಗುತ್ತಿರುವಂತೆಯೇ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ವೇದಿಕೆಯ ಜತೆಗೆ ಜಿಲ್ಲೆಯ ಜನರಿಗೆ ವೀಕೆಂಡ್ ಮನೋರಂಜನೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ನಗರದ ಪ್ರಮುಖ ರಸ್ತೆಗಳಾದ ಕದ್ರಿ ಪಾರ್ಕ್ ಎದುರು ಹಾಗೂ ಕ್ಲಾಕ್‌ ಟವರ್‌ನಿಂದ ಎಬಿಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾರಾಂತ್ಯ ರಸ್ತೆಬದಿ ಉತ್ಸವ(ವೀಕೆಂಡ್ ಸ್ಟ್ರೀಟ್ ಫೆಸ್ಟಿವಲ್)ಕ್ಕೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಉತ್ಸುಕತೆ ತೋರಿದ್ದಾರೆ.

ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಲಾದ ಜಿಲ್ಲಾಧಿಕಾರಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ವಾರಾಂತ್ಯದ ದಿನಗಳಲ್ಲಿ (ಶನಿವಾರ, ರವಿವಾರ) ನಿಗದಿತ ರಸ್ತೆಯುದ್ದಕ್ಕೂ ಸ್ಥಳೀಯ ಆಹಾರ, ಕರಕುಶಲ ವಸ್ತುಗಳು ಸೇರಿದಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಹಾಗೂ ಸ್ಥಳೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಜನರಿಗೆ ಮನೋರಂಜನೆಯ ಜತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಉತ್ಸವ ವರ್ಷಪೂರ್ತಿ ನಿರಂತರವಾಗಿ ವಾರಾಂತ್ಯದಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ. ಕೊರೋನ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆಯಾಗುವ ಜತೆಗೆ ಮೂರನೇ ಅಲೆಯ ಆತಂಕವಿಲ್ಲದಿದ್ದರೆ ಇದನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಬೀಚ್‌ಗಳ ಅಭಿವೃದ್ಧಿ, ಪಿಲಿಕುಳಕ್ಕೆ ಪ್ರವಾಸಿಗರ ಆಕರ್ಷಣೆಗೆ ಕ್ರವು

ತಣ್ಣೀರುಬಾವಿ, ಪಣಂಬೂರು ಸೇರಿದಂತೆ ದ.ಕ. ಜಿಲ್ಲೆಯ ಬೀಚ್‌ಗಳಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ರೀತಿಯ ಕ್ರಮಗಳನ್ನು ರೂಪಿಸಲಾಗಿದೆ. ಪ್ರವಾಸಿಗರಿಗೆ ಮಂಗಳೂರಿನ ಒಳಗಡೆ ಇರುವ ಬೀಚ್‌ಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಬಗ್ಗೆ ಸೆ.27ರಂದು ಪ್ರವಾಸೋದ್ಯಮ ದಿನದ ಅಂಗವಾಗಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಬೀಚ್‌ಗಳಿಗೆ ಆಗಮಿಸುವವರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಜತೆಗೆ ಹೊಟೇಲ್ ಮಾದರಿಯ ಊಟೋಪಾಚರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು.

ಬೆಂಗ್ರೆ ಬೀಚ್‌ನಲ್ಲಿ ಗಾಲ್ಫ್ ಕಾರ್ಸ್‌ಗಾಗಿ 2007-08ನೆ ಸಾಲಿನಲ್ಲಿ ಓಪಸ್ ಲಗೂನಾ ಸಂಸ್ಥೆ ಟೆಂಡರ್ ವಹಿಸಿದ್ದು, ಸಂಸ್ಥೆಗೆ ಇದೀಗ ಸಿಆರ್‌ಝೆಡ್ ಅನುಮತಿ ದೊರಕಿದೆ. ಇಲ್ಲಿ ಜಮೀನು ಒತ್ತುವರಿ ಸಮಸ್ಯೆ ಇರುವುದರಿಂದ ಅದಕ್ಕೆ ಸೂಕ್ತ ಕ್ರಮಗಳೊಂದಿಗೆ ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಿದಾಗ ಸ್ಥಳೀಯ ಸುಮಾರು 800 ಮಂದಿಗೆ ಉದ್ಯೋಗವೂ ದೊರಕಲಿದೆ. ಈ ಕುರಿತಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ 6 ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಸಸಿಹಿತ್ಲು ಹಾಗೂ ತಣ್ಣೀರುಬಾವಿ ಬೀಚ್‌ನಲ್ಲಿ ಸರಕಾರಿ ಸರ್ಫಿಂಗ್ ಸ್ಕೂಲ್ ಆರಂಭಿಸುವ ಪ್ರಸ್ತಾವ ಇದೆ. ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಈಗಾಗಲೇ 5 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಅಲ್ಲಿ ಯಾವುದೇ ರೀತಿಯ ತಾತ್ಕಾಲಿಕ ಮೂಲಭೂತ ಸೌಕರ್ಯಗಳನು ಮಾಡಿದಾಗಲೂ ಕಡಲ್ಕೊರೆತದಿಂದ ಸಮಸ್ಯೆಯಾಗುವ ಕಾರಣ, ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಜಂಗಲ್ ಲಾಡ್ಜ್ ಮಾದರಿಯಲ್ಲಿ ಅಲ್ಲಿ ತಾತ್ಕಾಲಿಕ ಸಾಂಪ್ರದಾಯಿಕ ಗುಡಿಸಲುಗಳ ನಿರ್ಮಾಣ, ಮೇಲ್ಛಾವಣಿ ರಹಿತ ರೆಸ್ಟೋರೆಂಟ್‌ಗಳ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪಿಲಿಕುಳಕ್ಕೆ ಜಿರಾಫೆ, ಜೀಬ್ರಾ, ಆನೆಗಳ ಆಕರ್ಷಣೆಗೆ ಕ್ರವು

ಪಿಲಿಕುಳ ಜೈವಿಕ ಉದ್ಯಾನನವಾಗಿದ್ದು, ನೈಸರ್ಗಿಕ ರೀತಿಯಲ್ಲಿ ಇಲ್ಲಿ ಪ್ರಾಣಿ, ಪಕ್ಷಿಗಳ ವಾಸಕ್ಕೆ ಅವಕಾಶವಿದೆ. ಈಗಿರುವ ವನ್ಯಜೀವಿಗಳಿಗೆ ವಿಶೇಷ ಆಕರ್ಷಣೆಯಾಗಿ ಜಿರಾಫೆ, ಜೀಬ್ರಾ ಹಾಗೂ ಆನೆಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಇದೇ ವೇಳೆ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಕಂಬಳವನ್ನು ಪಿಲಿಕುಳದಲ್ಲಿ ಮತ್ತೆ ನಡೆಸುವುದು, ನದಿ ಉತ್ಸವವನ್ನು ಆರಂಭಿಸುವ ಬಗ್ಗೆಯೂ ಆಲೋಚನೆ ಇದೆ.

ಇದೇ ವೇಳೆ ಇಲ್ಲಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೊಸ ಆಕರ್ಷಣೆ ನೀಡುವ ಆಲೋಚನೆಯೂ ಇದೆ. ತಣ್ಣೀರುಬಾವಿ ಅಭಿವೃದ್ಧಿ ಹಾಗೂ ಪಿಲಿಕುಳದ ಅಮ್ಯೂಸ್‌ಮೆಂಟ್ ಪಾರ್ಕ್‌ನ ನಿರ್ವಹಣೆಯ ಗುತ್ತಿಗೆ ಅವಧಿ ಇನ್ನೊಂದು ವರ್ಷವಿದ್ದು, ಈವರೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪವೂ ಇರುವುದರಿಂದ ಹೊಸ ಗುತ್ತಿಗೆಯ ವೇಳೆ ಹೊಸ ಯೋಜನೆಗಳೊಂದಿಗೆ ಕ್ರಮಕ್ಕೆ ಚಿಂತಿಸಲಾಗಿದೆ. ಇದೇ ವೇಳೆ ಹಿಂದೂ ಧಾರ್ಮಿಕ ಕ್ಷೇತ್ರಗಳು, ಚರ್ಚ್‌ಗಳು, ದರ್ಗಾಗಳ ವೈಶಿಷ್ಟ್ಯವನ್ನು ನೋಡಲು ಪ್ರವಾಸಿಗರನ್ನು ಆಕರ್ಷಿಸಲು ಹೊಟೇಲ್ ಉದ್ಯಮಿಗಳ ಪ್ರಾಯೋಜಕತ್ವದಲ್ಲಿ ಯೋಜನೆ ರೂಪಿಸುವ ಬಗ್ಗೆಯೂ ಕ್ರಮ ವಹಿಸಲಾಗುವುದು. ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ದ.ಕ. ಜಿಲ್ಲೆಯ ವಿಶೇಷ ಆಕರ್ಷಣೆಗಳ ಬಗ್ಗೆ ಫೋಟೋ, ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವುದು, ಶೈಕ್ಷಣಿಕವಾಗಿ ತಮ್ಮ ಮಕ್ಕಳ ಜತೆ ಬರುವ ಪೋಷಕರಿಗೆ ಸ್ಥಳೀಯ ವೈಶಿಷ್ಟ್ಯಗಳನ್ನು ಆ ಶಿಕ್ಷಣ ಸಂಸ್ಥೆಗಳ ಮೂಲಕ ತೋರ್ಪಡಿಸುವ ವ್ಯವಸ್ಥೆ ಬಗ್ಗೆಯೂ ಸೋಮವಾರ ನಡೆಯಲಿರುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News