×
Ad

ಮಂಗಳೂರು: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

Update: 2021-09-24 17:19 IST

ಮಂಗಳೂರು, ಸೆ.24: ಸರಕಾರದ ವಿವಿಧ ಯೋಜನೆಗಳ ಕಾರ್ಮಿಕರಾದ ಅಕ್ಷರದಾಸೋಹ, ಅಂಗನವಾಡಿ, ಆಶಾ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯವ್ಯಾಪ್ತಿ ಪ್ರತಿಭಟನೆಯ ಭಾಗವಾಗಿ ದ.ಕ.ಜಿಪಂ ಕಚೇರಿಯ ಮುಂದೆ ಶುಕ್ರವಾರ ಅಕ್ಷರದಾಸೋಹ ನೌಕರರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರಿನಲ್ಲೂ ಪ್ರತಿಭಟನೆ ನಡೆಯಿತು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ದ.ಕ.ಜಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಈ ಕಾರ್ಮಿಕರಿಗೆ ಕಳೆದ ಹಲವು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ. ವೇತನವಿಲ್ಲದೆ ಬದುಕುವ ಬಡ ಕಾರ್ಮಿಕರ ಬಗ್ಗೆ ಸರಕಾರಗಳಿಗೆ ಕಾಳಜಿ ಇಲ್ಲ ಎಂದರು.

ಒಂದೆಡೆ ಶ್ರೀಮಂತರು ಅತ್ಯಂತ ಶ್ರೀಮಂತರಾಗುತ್ತಿದ್ದರೆ ಇನ್ನೊಂದೆಡೆ ಶೇ.70ಕ್ಕೂ ಅಧಿಕ ಜನರು ಬಡತನ ರೇಖೆಯಿಂದ ಕೆಳಗಡೆ ಬದುಕುತ್ತಿದ್ದಾರೆ. ದಿನಬಳಗೆ ಸಾಮಗ್ರಿ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ವೇತನ ಏರಿಕೆಯಾಗುತ್ತಿಲ್ಲ. ಕೊರೋನ ಲಾಕ್‌ಡೌನ್ ಬಳಿಕವಂತೂ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ಅಕ್ಷರ ದಾಸೋಹ ಸಂಘಟನೆಯ ಜಿಲ್ಲಾಧ್ಯಕ್ಷೆ ಭವ್ಯಾ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ ಮಾತನಾಡಿದರು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ರತ್ನಮಾಲಾ, ರೇಖಲತಾ, ಅರುಣಾ, ಶಾಲಿನಿ, ಜಯಶ್ರೂ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News